ಮೈಸೂರು: ಬೆಂಗಳೂರುನಲ್ಲಿ ಈಗಾಗಲೇ ಅಕ್ರಮ-ಸಕ್ರಮ ಯೋಜನೆಯನ್ನು ಪುನಃ ಜಾರಿಗೆ ತಂದಂತೆ ಮೈಸೂರು ನಗರದಲ್ಲಿಯೂ ಅವಕಾಶ ಮಾಡಿಕೊಡುವ ಬಗ್ಗೆ ಪರಿಶೀಲಿಸಿ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಗುರುವಾರ ಮುಡಾ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹಾಗೂ ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು ನೇತೃತ್ವದಲ್ಲಿ ನಡೆದ ಕೊರೊನಾ ಹಿನ್ನೆಲೆ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಸಭೆಯಲ್ಲಿ ಹೇಳಿದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail
ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜು, ಕೊರೊನಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಗಾಲೇ ಕೈಗೊಂಡ ಕಾರ್ಯಗಳು ಶ್ಲಾಘನೀಯ. ಇದೇ ರೀತಿಯ ಕೆಲಸವನ್ನು ಮುಂದೂ ಮುಂದುವರಿಸಿಕೊಂಡು ಹೋಗಿ. ನಿಮಗೆ ಬೇಕಾದ ಸಹಕಾರವನ್ನು ನಾನು ಹಾಗೂ ನಮ್ಮ ಸರ್ಕಾರ ಮಾಡಲಿದೆ. ನಮ್ಮದು ಕೊರೋನಾ ಮುಕ್ತ ರಾಜ್ಯ ಆಗಬೇಕೆಂಬ ಗುರಿ ಇದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯನಿರ್ವಹಿಸಿ ಎಂಬುದು ನನ್ನ ಸಲಹೆ ಎಂದು ಹೇಳಿದರು.
ಮೈಸೂರು ಮಹಾನಗರ ಪಾಲಿಕೆ ಸಮಸ್ಯೆ ನೀಗಿಸಬೇಕೆಂಬುದು ನನ್ನ ಆಸೆ ಕೂಡ. ಕಳೆದ 3 ತಿಂಗಳಿಂದ ಕೊರೋನಾ ಹಿನ್ನೆಲೆಯಲ್ಲಿ ನೂರಾರು ಕೋಟಿಗೂ ಹೆಚ್ಚು ಆದಾಯ ಖೋತಾ ಆಗಿದೆ. ಎಲ್ಲಾ ನಗರ ಪಾಲಿಕೆಗಳೂ ಅನುದಾನ ಕೊಡಬೇಕು ಎಂಬ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಅವರೂ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೊರೊನಾ ಆತಂಕ ದೂರವಾಗಲಿ, ಬಳಿಕ ಗಮನಹರಿಸೋಣ ಎಂದು ತಿಳಿಸಿದ್ದಾಗಿ ಬಸವರಾಜು ಮಾಹಿತಿ ನೀಡಿದರು.
ಎಲ್ಲಾ ನಗರಪಾಲಿಕೆಗಳಲ್ಲೂ ಎಲ್‍ಇಡಿ ಮಾಡಬೇಕೆಂಬ ನಿಟ್ಟಿನಲ್ಲಿ ನಾನು ಶ್ರಮವಹಿಸಿದ್ದು, ಮುಖ್ಯಮಂತ್ರಿಗಳ ಜೊತೆಗೂ ಚರ್ಚಿಸಿದ್ದೇನೆ. ಕೊರೊನಾ ಪ್ರಕರಣಗಳು ಮುಗಿದ ಮೇಲೆ ಶೀಘ್ರವಾಗಿ ಎಲ್ಲಾ ಕಡೆಯೂ ಸೌಲಭ್ಯ ಸಿಗುವಂತೆ ಮಾಡಲಾಗುವುದು ಎಂದು ತಿಳಿಸಿದರು.
ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಮುಡಾ ಪ್ರದೇಶದಲ್ಲಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಮಾಡಿಕೊಳ್ಳುವ ಸಂಬಂಧ ಮಂಡ್ಯ ಜಿಲ್ಲಾಧಿಕಾರಿ ಬಳಿಯೂ ಚರ್ಚಿಸಿತ್ತೇನೆ. ಮೈಸೂರು ಜಿಲ್ಲಾಧಿಕಾರಿ ಒಳಗೊಂಡಂತೆ ಸಭೆ ನಿಗದಿಪಡಿಸಿ ಅದನ್ನು ಬಗೆಹರಿಸೋಣ. ಸದ್ಯಕ್ಕೆ ಸರ್ಕಾರಿ ಜಮೀನನ್ನು ಇದಕ್ಕೆ ಮಂಜೂರು ಮಾಡಿದ ಬಗ್ಗೆ ದಾಖಲೆಕೊಟ್ಟರೆ ನಾವು ಕಾಮಗಾರಿ ಪ್ರಾರಂಭವಾಗುವಂತೆ ನೋಡಿಕೊಳ್ಳುತ್ತೇವೆ. ಒಟ್ಟಾರೆ ಜನತೆಗೆ ನೀರಿನ ಸಮಸ್ಯೆಯನ್ನು ನೀಗಿಸೋಣ ಎಂದು ಸೋಮಶೇಖರ್ ಹಾಗೂ ಬಸವರಾಜು ತಿಳಿಸಿದರು.
ಸಂಸದ ಪ್ರತಾಪ್‍ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಜಿ.ಟಿ.ದೇವೇಗೌಡ, ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಗುರುದತ್ ಹೆಗ್ಡೆ, ಮೇಯರ್ ತಸ್ನಿಂ ಇತರರು ಉಪಸ್ಥಿತರಿದ್ದರು.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಿ: https://play.google.com/store/apps/detail