ಬೆಂಗಳೂರು: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ಏಪ್ರಿಲ್‌ನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸಿದ ವೇಳೆ ನಾಲ್ಕೂ ನಿಗಮಗಳಲ್ಲಿ ಹಲವು ನೌಕರರಿಗೆ ವಜಾ, ಅಮಾನತು ಮತ್ತು ವರ್ಗಾವಣೆಯಂತಹ ಶಿಕ್ಷೆ ನೀಡಿದ್ದು, ಈ ಸಂಬಂಧ ದಾಖಲಾಗಿರುವ ನೌಕರರ ಪ್ರಕರಣದ ವಿಚಾರಣೆ ಹೈ ಕೋರ್ಟ್ ದ್ವಿಸದಸ್ಯ ನ್ಯಾಯಪೀಠದ ಮುಂದೆ ಇಂದು ನಡೆಯಿತು.
ಹೈ ಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾ.ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾ.ಸಚಿನ್ ಶಂಕರ್ ಮಗದುಮ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ವಿಚಾರಣೆ ಕೈಗೆತ್ತಿಕೊಂಡಿತು. ಈ ವೇಳೆ ಎರಡೂ ಕಡೆಯ ವಕೀಲರು ಹಾಜರಿದ್ದರು. ವಾದ ಪ್ರತಿವಾದವನ್ನು ಆಲಿಸಿದ ನ್ಯಾಯಪೀಠ ಪ್ರಕರಣ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿತು.
ಇದೇ ಆಗಸ್ಟ್ 3ರಂದು ಹೈ ಕೋರ್ಟ್ ಮುಖ್ಯನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ಸೂರಜ್ ಗೋವಿಂದರಾಜ್ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸಿ ಅಂದು ಆಗಸ್ಟ್ 27ಕ್ಕೆ (ಇಂದಿಗೆ) ಮುಂದೂಡಿತ್ತು. ಆದರೆ, ಹೈ ಕೋರ್ಟ್ ಮುಖ್ಯನ್ಯಾಯಮೂರ್ತಿ ಎ.ಎಸ್. ಓಕಾ ಅವರಿಗೆ ಮುಂಬಡ್ತಿ ನೀಡಿದ್ದು ಅವರು ಸುಪ್ರೀಂ ಕೋರ್ಟ್‌ಗೆ ವರ್ಗಾವಣೆ ಗೊಂಡಿರುವುದರಿಂದ ಇಂದು ಬದಲಿ ಬೆಂಚ್‌ನಲ್ಲಿ ಈ ಪ್ರಕರಣದ ವಿಚಾರಣೆ ಬಂದಿತ್ತು. ಹೀಗಾಗಿ ವಿಚಾರಣೆ ಮುಂದೂಡಲ್ಪಟ್ಟಿರುವುದು ಒಂದು ಕಾರಣವಾಗಿದೆ.
ಅಲ್ಲದೆ ಮತ್ತೊಂದು ಕಾರಣ ಕೆಎಸ್‌ಆರ್‌ಟಿಸಿ ಪರ ವಕೀಲರು ಇನ್ನೂ ವಜಾ, ವರ್ಗಾವಣೆ ಮತ್ತು ಅಮಾನತು ಆಗಿರುವ ನೌಕರರ ಮಾಹಿತಿಯನ್ನು ಕಲೆಹಾಕುತ್ತಿರುವುದಾಗಿ ಹೇಳಿದ್ದರಿಂದ ನ್ಯಾಯಪೀಠವು ಅಕ್ಟೋಬರ್ 28ಕ್ಕೆ ವಿಚಾರಣೆಯನ್ನು ಮುಂದೂಡಿದೆ ಎಂದು ನೌಕರರ ಪರ ವಕೀಲರಾದ ಅಮೃತೇಶ್ ತಿಳಿಸಿದರು.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದ ಮುಂದಿನ ವಿಚಾರಣೆಗಳು ಈ ಬದಲಿ ಬೆಂಚ್‌ನಲ್ಲಿ ನಡೆಯುವುದರಿಂದ ಮತ್ತೆ ಈ ಬೆಂಚ್‌ನ ನ್ಯಾಯಮೂರ್ತಿಗಳಾದ ನ್ಯಾ.ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾ.ಸಚಿನ್ ಶಂಕರ್ ಮಗದುಮ್ ಅವರು ಈ ಹಿಂದೆ ನಡೆದಿರುವ ಪ್ರತಿಯೊಂದನ್ನು ಗಮನಿಸಬೇಕಿರುವುದರಿಂದ ಸ್ವಲ್ಪ ಹೆಚ್ಚಿನ ಸಮಯಕ್ಕೆ ವಿಚಾರಣೆ ಮುಂದೂಡಲ್ಪಟ್ಟಿದೆ ಎಂದು ಹೇಳಿದರು.
ಒಟ್ಟಾರೆ ಇಂದು ಹೈಕೋರ್ಟ್‌ನಲ್ಲಿ ನಡೆದ ಈ ಪ್ರಕರಣದ ವಿಚಾರಣೆಯಿಂದ ನೌಕರರಿಗೆ ಯಾವುದೇ ಲಾಭವಾದಂತೆ ಕಾಣಿಸುತ್ತಿಲ್ಲ. ಹೀಗಾಗಿ ಮತ್ತೆ ಅಕ್ಟೋಬರ್ 28ರಂದು ನಡೆಯುವ ವಿಚಾರಣೆ ವರೆಗೂ ನೌಕರರು ಕಾಯಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.
ಆಗಸ್ಟ್ 3ರಂದು ನಡೆದ ವಿಚಾರಣೆಯ ಸಂಕ್ಷಿಪ್ತ ವಿವರ: ಆಗಸ್ಟ್ 3ರಂದು ನ್ಯಾಯಪೀಠದ ಮುಂದೆ ಸಾರಿಗೆ ನೌಕರರ ಪರ ವಕೀಲ ಅಮೃತೇಶ್ ವಾದಮಂಡಿಸಿ, ವಜಾ ಮತ್ತು ವರ್ಗಾವಣೆಗೊಂಡ ನೌಕರರ ಬಗ್ಗೆ ಇದುವರೆಗೂ ಸರಿಯಾದ ನಿಲುವನ್ನು ಸಾರಿಗೆ ಅಧಿಕಾರಿಗಳು ತೆಗೆದುಕೊಂಡಿಲ್ಲ. ತಮಗೆ ಇಷ್ಟ ಬಂದ ಕೆಲವೇ ಕೆಲವು ನೌಕರರ ವರ್ಗಾವಣೆಯನ್ನು ರದ್ದು ಪಡಿಸಿದ್ದು, ಆದರೆ ಅವರಿಗೂ ಮೂಲ ಸ್ಥಳದಲ್ಲೇ ಕರ್ತವ್ಯ ನಿರ್ವಹಿಸಲ ಬಿಡದೆ ಮತ್ತೆ ಬೇರೆ ಡಿಪೋಗಳಿಗೆ ವರ್ಗಾವಣೆ ಮಾಡಲಾಗಿದೆ ಇದು ಯಾವ ನ್ಯಾಯ ಹೇಳಿ ಎಂದು ವಾದ ಮಂಡಿಸಿದರು.
ಅಲ್ಲದೆ ವಜಾಗೊಂಡಿರುವ ನೌಕರರು ಅತಂತ್ರ ಸ್ಥಿತಿಯನ್ನು ತಲುಪಿದ್ದಾರೆ. ಹೀಗಾಗಿ ಅವರಿಗೆ ಶೀಘ್ರ ಗತಿಯಲ್ಲಿ ನ್ಯಾಯ ದೊರಕಿಸಿಕೊಡುವ ಮೂಲಕ ಅವರ ಕುಟುಂಬಗಳನ್ನು ಗೌರವಯುತವಾಗಿ ಬದುಕುವಂತೆ ಮಾಡಬೇಕು ಎಂದು ಆಗಸ್ಟ್ 3ರಂದು ನ್ಯಾಯಪೀಠದ ಗಮನ ಸೆಳೆದಿದ್ದರು.
ಇನ್ನು ಕೆಎಸ್‌ಆರ್‌ಟಿಸಿ ಪರ ವಕೀಲರು ಕೆಲವು ನೌಕರರ ವರ್ಗಾಣೆ ಮತ್ತು ವಜಾವನ್ನು ವಾಪಸ್ ತೆಗೆದುಕೊಂಡು ಕರ್ತವ್ಯಕ್ಕೆ ನಿಯೋಜಿಸಲಾಗಿದೆ ಎಂದು ಪೀಠದ ಗಮನಕ್ಕೆ ತಂದಿದ್ದರು. ಆ ವೇಳೆ ಎಷ್ಟು ನೌಕರರನ್ನು ವಾಪಸ್ ಕರೆಸಿಕೊಂಡಿದ್ದೀರಿ ಎಂದು ನ್ಯಾಯಪೀಠ ಕೇಳಿದಾಗ ಅದಕ್ಕೆ ಸಮಂಜಸವಾದ ಉತ್ತರ ನೀಡದ ವಕೀಲರಿಗೆ ಈ ಬಗ್ಗೆ ಮುಂದಿನ ವಿಚಾರಣೆಯಲ್ಲಿ ಎಲ್ಲ ಮಾಹಿತಿ ನೀಡುವಂತೆ ತಾಕೀತು ಮಾಡಿತ್ತು.
ಇನ್ನು ಈ ಪ್ರಕರಣ ಸಂಬಂಧ ಮುಂದಿನ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಮುಂದೆ ಒಂದು ವಿಚಾರಣೆ ಬರಲಿದ್ದು, ಅಲ್ಲಿಯಾದರೂ ನೌಕರರಿಗೆ ಸಿಹಿ ಸುದ್ದಿ ಸಿಗುವ ಭರವಸೆ ಇದೆ ಎಂದು ಸುಪ್ರೀಂಕೋರ್ಟ್ ಹಾಗೂ ಹೈ ಕೋರ್ಟ್ ವಕೀಲ ಎಚ್.ಬಿ.ಶಿವರಾಜು ವಿಜಯಪಥಕ್ಕೆ ತಿಳಿಸಿದ್ದಾರೆ.
ನೌಕರರಿಗೆ ಈ ವಿಷಯ ಕೇಳೆ ತುಂಬಾ ನೋವಾಗಿದೆ. ನಮ್ಮ ಕಾನೂನುಯುತ ಬೇಡಿಕೆ ಈಡೇಸಲು ಯಾವ ಪಕ್ಷದವರೂ ಧ್ವನಿ ಎತ್ತದಿರುವುದು ನಾವು ಎಲ್ಲಿದ್ದೇವೆ ಎಂದು ಪ್ರಶ್ನಿಸಿಕೊಳ್ಳುವಂತ್ತಿದೆ.
ಈ ಬಗ್ಗೆ ಕೂಟದ ಪದಾಧಿಕಾರಿಗಳು ದಯಮಾಡಿ ಏನಾದರೂ ಮಾತನಾಡಿ ಕಾರ್ಮಿಕರಿಗೆ ಒಂದು ಭರವಸೆ ಕೊಡಿ