ಧಾರವಾಡ: ಕೋವಿಡ್ ನಿಯಂತ್ರಣಕ್ಕಾಗಿ ಪ್ರತಿ ನಾಗರಿಕರೂ ತಮ್ಮ ಜವಾಬ್ದಾರಿಗಳನ್ನು ಅರಿತು ಮುನ್ನಡೆಯಬೇಕಾಗಿದೆ. ಇತ್ತೀಚೆಗೆ ಸೋಂಕು ಹರಡುವಿಕೆ ವಿಶ್ಲೇಷಿಸಿದಾಗ ಕುಟುಂಬದಲ್ಲಿ ಒಬ್ಬರಿಗೆ ಸೋಂಕು ಕಾಣಿಸಿಕೊಂಡರೂ ಕೂಡ ಅದು ಇತರ ಸದಸ್ಯರಿಗೆ ಮತ್ತು ಸಂಬಂಧಿಗಳಿಗೆ ವ್ಯಾಪಿಸುತ್ತಿದೆ. ಇದನ್ನು ನಿಯಂತ್ರಿಸಲು ಮನೆಗಳಲ್ಲಿ ಕುಟುಂಬದ ಸದಸ್ಯರೂ ಕೂಡ ಆಂತರಿಕವಾಗಿ ಪ್ರತ್ಯೇಕತೆ, ಸ್ವಚ್ಛತೆ, ಅಂತರದ ನಿಯಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಹೋಟೆಲ್, ಕೈಗಾರಿಕೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವರ್ತಕರು, ವ್ಯಾಪಾರಿಗಳ ಪ್ರತ್ಯೇಕ ಸಭೆ ಉದ್ದೇಶಿಸಿ ಮಾತನಾಡಿದರು.
ದುಡಿಯುವ ವ್ಯಕ್ತಿಗಳು ಹೊರಗಡೆ ಸುತ್ತಾಡಿ ಮರಳಿ ಮನೆಗೆ ಬಂದ ನಂತರ ನೇರವಾಗಿ ಕುಟುಂಬದ ಸದಸ್ಯರೊಂದಿಗೆ ಬೆರೆಯಬಾರದು. ಕೈ, ಕಾಲು, ಮುಖ ಸ್ವಚ್ಛವಾಗಿ ತೊಳೆದುಕೊಂಡು, ಸ್ಯಾನಿಟೈಸರ್ ಬಳಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಇದನ್ನು ನಿರ್ಲಕ್ಷಿಸಿದರೆ ಅನಗತ್ಯವಾಗಿ ಕುಟುಂಬದ ಹಿರಿಯರಿಗೆ, ಮಕ್ಕಳಿಗೆ ತೊಂದರೆ ನೀಡಿದಂತಾಗುತ್ತದೆ ಎಂದು ತಿಳಿಸಿದರು.
ಕುಟುಂಬದ ಒಬ್ಬರಿಗೆ ಸೋಂಕು ಕಂಡುಬಂದರೆ ಉಳಿದವರಿಗೂ ಸುಲಭವಾಗಿ ಹರಡುತ್ತಿದೆ. ಪ್ರತಿಯೊಬ್ಬ ಸದಸ್ಯರೂ ಪ್ರತ್ಯೇಕ ಟವೆಲ್, ತಟ್ಟೆ, ಲೋಟ ಬಳಸಬೇಕು. ಅಂಗಡಿ, ಮುಂಗಟ್ಟುಗಳು ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಇರಿಸಿ, ಗ್ರಾಹಕರು ಮತ್ತು ಕಾರ್ಮಿಕರಿಗೆ ಬಳಸುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
ಪ್ರತಿಯೊಬ್ಬರೂ ಗುಣಮಟ್ಟದ ಮಾಸ್ಕ್ ಧರಿಸಲೇಬೇಕು. ಥರ್ಮಲ್ ಸ್ಕ್ಯಾನಿಂಗ್, ಪಲ್ಸ್ ಆಕ್ಸಿಮೀಟರ್ ಉಪಯೋಗಿಸುವುದೂ ಕೂಡ ಸೋಂಕು ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಸಲಹೆ ನೀಡಿದರು.