ಜುಲೈ 15 ರ ಬೆಳಗ್ಗೆ 10 ಗಂಟೆಯಿಂದ ಜುಲೈ 24 ರವರೆಗೆ ಲಾಕ್‍ಡೌನ್ ಜಾರಿ
ಧಾರವಾಡ: ಕೋವಿಡ್ ನಿಯಂತ್ರಣಕ್ಕಾಗಿ ಧಾರವಾಡ ಜಿಲ್ಲೆಯಲ್ಲಿ ಜುಲೈ 15 ರ ಬೆಳಗ್ಗೆ 10 ಗಂಟೆಯಿಂದ ಜುಲೈ 24 ರವರೆಗೆ ಲಾಕ್‍ಡೌನ್ ಜಾರಿಗೊಳಿಸಿರುವುದರಿಂದ ಈ ಅವಧಿಯಲ್ಲಿ ಸರಕು ಸಾಗಣೆ ಹೊರತುಪಡಿಸಿ, ಯಾವುದೇ ಸಾರಿಗೆ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ ಕೆ.ಪಾಟೀಲ ತಿಳಿಸಿದ್ದಾರೆ.
ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಲಾಕ್‍ಡೌನ್ ಜಿಲ್ಲೆಗೆ ಮಾತ್ರ ಸೀಮಿತವಾಗಿರುವುದರಿಂದ ಸಾರಿಗೆ ವಾಹನಗಳ ಸಂಚಾರದ ಬಗ್ಗೆ ವಿಶೇಷ ಗಮನ ನೀಡಬೇಕಾಗಿದೆ ಎಂದು ಹೇಳಿದರು.
ಜಿಲ್ಲೆಯ ಮಾರ್ಗವಾಗಿ ಅನ್ಯಜಿಲ್ಲೆಗಳು ಮತ್ತು ಸ್ಥಳಗಳಿಗೆ ತೆರಳುವ ಸಾರಿಗೆ ಸಂಸ್ಥೆ ಬಸ್‌ಗಳು ಮತ್ತು ಇತರ ವಾಹನಗಳು ಧಾರವಾಡ ಜಿಲ್ಲೆಗೆ ಪ್ರಯಾಣಿಕರನ್ನು ಕರೆತರಬಾರದು. ಜಿಲ್ಲೆಯ ಯಾವುದೇ ಸ್ಥಳದಲ್ಲಿ ಅಂತಹ ವಾಹನಗಳ ನಿಲುಗಡೆ ಮತ್ತು ಪ್ರಯಾಣಿಕರನ್ನು ಇಳಿಸಲು ಅವಕಾಶವಿಲ್ಲ ಎಂದು ತಿಳಿಸಿದರು.
ಧಾರವಾಡ ಜಿಲ್ಲೆಯ ಮಾರ್ಗವಾಗಿ ಬೇರೆ ಜಿಲ್ಲೆಗಳಿಗೆ ತೆರಳುವ ಸಾರಿಗೆ ವಾಹನಗಳು ಜಿಲ್ಲೆಯ ಯಾವುದೇ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನಿಲುಗಡೆ ಮಾಡಬಾರದು. ಬೈಪಾಸ್ ರಸ್ತೆಗಳ ಮೂಲಕ ಸಂಚರಿಸಬಹುದು ಎಂದರು.
ಜಿಲ್ಲೆಗೆ ಪ್ರಯಾಣಿಕರನ್ನು ಕರೆತರಲು ಅವಕಾಶವಿಲ್ಲ. ಈ ಕುರಿತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಿವಿಧ ನಿಗಮಗಳು, ವಿಭಾಗಗಳಿಗೆ ನೆರೆಯ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರು.
ಹುಬ್ಬಳ್ಳಿ ಧಾರವಾಡ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಅಪ್ಪಯ್ಯ ನಾಲತ್ವಾಡಮಠ ಹಾಗೂ ಸಿ.ಡಿ. ನಾಯಕ್ ಇದ್ದರು.