ಟೋಕಿಯೋ: ಟೋಕಿಯೊ ಒಲಿಂಪಿಕ್ಸ್ -2020ರಲ್ಲಿ ಭಾರತದ ಪದಕ ಬೇಟೆಯ ಅಭಿಯಾನ ಆರಂಭವಾಗಿದೆ. ಜಪಾನ್ ನ ಟೋಕಿಯೊ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಡೆದ ಮಹಿಳಾ 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ವೇಟ್ ಲಿಫ್ಟರ್ ಸೈಖೋಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ.
49 ಕೆ ಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ನಾಲ್ಕು ಸುತ್ತಿನ ಪ್ರಯತ್ನಗಳಲ್ಲಿ ಚಾನು ಒಟ್ಟು 202 ಕೆಜಿ (ಸ್ನ್ಯಾಚ್‌ನಲ್ಲಿ 87 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 115 ಕೆಜಿ) ಎತ್ತಿದ್ದಾರೆ.
ಚೀನಾದ ಝಿಹೈ ಹು ಒಟ್ಟು 210 ಕೆಜಿ ತೂಕ ಎತ್ತಿ ಚಿನ್ನದ ಪದಕ ಗಳಿಸಿ ಹೊಸ ಒಲಿಂಪಿಕ್ ದಾಖಲೆಯನ್ನು ಸೃಷ್ಟಿಸಿದರೆ, ಇಂಡೋನೇಷ್ಯಾದ ವಿಂಡಿ ಕ್ಯಾಂಟಿಕಾ ಐಸಾ ಒಟ್ಟು 194 ಕೆಜಿ ತೂಕದೊಂದಿಗೆ ಕಂಚು ಪದಕ ಗಳಿಸಿದ್ದಾರೆ.
ಇಂದು ಸ್ಮರಣೀಯ ಗಳಿಗೆಯಲ್ಲಿ ಬೆಳ್ಳಿ ಪದಕ ಗಳಿಸುವ ಮೂಲಕ ಚಾನು ಅವರು ಒಲಿಂಪಿಕ್ ಗೇಮ್ ನ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಪದಕ ಗಳಿಸಿದ ಎರಡನೇ ಭಾರತೀಯ ಮಹಿಳೆಯಾಗಿದ್ದಾರೆ.
2000ನೇ ಇಸವಿಯಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಒಲಿಂಪಿಕ್ ಗೇಮ್ ನಲ್ಲಿ 69 ಕೆ ಜಿ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗಳಿಸಿದ್ದರು.