ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ಬಾರಿ ಬೆಂಗಳೂರಿಗೆ ಬಂದಾಗ ಪೀಣ್ಯ ಕೈಗಾರಿಕಾ ಪ್ರದೇಶಕ್ಕೂ ಆಗಮಿಸಿ ಅಲ್ಲಿನ ಮೂಲ ಸೌಕರ್ಯವನ್ನು ವೀಕ್ಷಿಸಬೇಕು ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಟ್ವೀಟ್ ಮಾಡಿ ಆಗ್ರಹಿಸಿದರು.
“ಒಂದು ಕಾಲದಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶವು ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶವೆಂಬ ಖ್ಯಾತಿಗೆ ಪಾತ್ರವಾಗಿತ್ತು. ಆದರೆ ಇಂದು ಸರ್ಕಾರದ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅಲ್ಲಿನ ರಸ್ತೆಗಳಲ್ಲಿ ಗುಂಡಿಗಳು ಮಾತ್ರವಲ್ಲದೇ ಮೃತ್ಯಕೂಪಗಳೇ ಸೃಷ್ಟಿಯಾಗಿವೆ. ಮೂಲಸೌಕರ್ಯಗಳಿಲ್ಲದೇ ಹಾಳುಕೊಂಪೆಯಾಗಿದೆ.
ಆದ್ದರಿಂದ ಮೋದಿಯವರು ಇಲ್ಲಿಗೆ ಭೇಟಿ ನೀಡಬೇಕು. ಮೋದಿಯವರು ಭೇಟಿ ನೀಡುವ ಸ್ಥಳಗಳಲ್ಲಿ ಮಾತ್ರ ಸರ್ಕಾರ ದುರಸ್ತಿ ಕಾಮಗಾರಿ ಕೈಗೊಳ್ಳುವುದರಿಂದ, ಮೋದಿಯವರು ಇಲ್ಲಿಗೆ ಭೇಟಿ ನೀಡಿದರೆ ಸಮಸ್ಯೆಗಳು ಬಗೆಹರಿಯಬಹುದು” ಎಂದು ಪೃಥ್ವಿ ರೆಡ್ಡಿ ಹೇಳಿದರು.
“ಭಾರೀ ಪ್ರಮಾಣದ ತೆರಿಗೆ ಸಂಗ್ರಹವಾಗುವ ಪೀಣ್ಯ ಕೈಗಾರಿಕಾ ಪ್ರದೇಶವು ರಾಜ್ಯ ಹಾಗೂ ದೇಶದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಆದರೆ ಇದಕ್ಕೆ ಪ್ರತಿಯಾಗಿ ಸರ್ಕಾರದ ಸಹಾಯ ಸಿಗುತ್ತಿಲ್ಲ. ವಿಶೇಷ ಪ್ಯಾಕೇಜ್ ಘೋಷಿಸಿ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಇತ್ತೀಚಿಗೆ ಅಕ್ಟೋಬರ್‌ನಲ್ಲಿ ಬಿಬಿಎಂಪಿ ನಡೆಸಿದ ಸಮೀಕ್ಷೆಯಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲೇ 499 ರಸ್ತೆ ಗುಂಡಿಗಳು ಪತ್ತೆಯಾಗಿದ್ದವು. ಇದರಲ್ಲಿ ಬೆರಳೆಣಿಕೆಯ ಗುಂಡಿಗಳನ್ನು ಮಾತ್ರ ಮುಚ್ಚಲಾಗಿದ್ದು, ರಸ್ತೆಗಳು ತೀರಾ ದುಸ್ಥಿತಿಯಲ್ಲಿವೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.
Request Prime Minister Modi to visit Peenya Industrail Area, in Bengaluru during his next visit.
The area which was at one time Asia's largest Industrial area today has been completely neglected and has hopeless infrastructure, not potholes but death traps in the roads ! pic.twitter.com/wxTAn4DrBs— Prithvi Reddy (@aapkaprithvi) November 11, 2022