
ಬೆಂಗಳೂರು: ಸಾರಿಗೆ ನೌಕರರ ವೇತನ ಹೆಚ್ಚಳ ಕುರಿತು ಚರ್ಚಿಸಲು ಇದೇ ಏ.15ರಂದು ಆಯೋಜಿಸಿರುವ ಸರ್ವ ಸಂಘಗಳ ಜತೆ ಸಿಎಂ ಸಭೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆ ಪದಾಧಿಕಾರಿಗಳನ್ನು ಆಹ್ವಾನಿಸಿಲ್ಲ ಎಂದು ವೇದಿಕೆ ಅಧ್ಯಕ್ಷ ವೈ.ಎಂ. ಶಿವರೆಡ್ಡಿ ಆಕ್ಷೇಪಿಸಿದ್ದಾರೆ.
ಅಲ್ಲದೆ ಈ ಸಂಬಂಧ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೆ ಲಿಖಿತ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಸಾರಿಗೆ ನೌಕರರ ಬೇಡಿಕೆಗಳ ಕುರಿತು ಚರ್ಚಿಸಲು ದಿನಾಂಕ 15-04-2025 ರಂದು ಸಭೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆಯುತ್ತಿದ್ದು, ಆ ಸಭೆಗೆ ಕೇವಲ ಕಾರ್ಮಿಕ ಸಂಘಟನೆಗಳನ್ನು ಮಾತ್ರ ಕರೆಯಲಾಗಿದೆ. ಈ ಕೆಲವು ಸಂಘಟನೆಗಳನ್ನು ಮಾತ್ರ ಆಹ್ವಾನಿಸಲಾಗಿದ್ದು, ಅತೀ ಹೆಚ್ಚು ಸದಸ್ಯರನ್ನು ಹೊಂದಿರುವ ನಮ್ಮ ವಿಚಾರ ವೇದಿಕೆ ಸಂಘವನ್ನು ಆಹ್ವಾನಿಸಿಲ್ಲ. ಈ ಕ್ರಮ ಅಸಂವಿಧಾನಾತ್ಮಕ ನಡೆ ಎಂದು ವೇದಿಕೆ ವ್ಯಕ್ತಪಡಿಸುತ್ತದೆ ಎಂದಿದ್ದಾರೆ.
ಕಾರ್ಮಿಕ ಸಂಘಟನೆಯಲ್ಲಿ ಕೇವಲ ಕಾರ್ಮಿಕ ಎಂದು ಗುರುತಿಸಿಕೊಳ್ಳುವ ವರ್ಗದವರು ಮಾತ್ರ ಸದಸ್ಯರಿದ್ದರೆ, ಕರಾರಸಾ ನಿಗಮಗಳ ನೌಕರರ ಮೂಲಭೂತ ಹಕ್ಕುಗಳ ವಿಚಾರ ವೇದಿಕೆಯಲ್ಲಿ ಶುಚಿಗಾರ ಹುದ್ದೆಯಿಂದ ಇಲಾಖಾ ಮುಖ್ಯಸ್ಥರ ಹುದ್ದೆವರೆಗಿನ ಎಲ್ಲ ವರ್ಗದ ನೌಕರರು ಒಳಗೊಂಡಿದ್ದಾರೆ.
ಮುಖ್ಯವಾಗಿ ಯಾರೊಬ್ಬ ಹೊರಗಿನ ಖಾಸಗೀ ವ್ಯಕ್ತಿಗಳಿಲ್ಲ. ಹಾಲಿ ನೌಕರರು ಮಾತ್ರ ಈ ಸಂಘಟನೆಯಲ್ಲಿದ್ದಾರೆ ಎನ್ನುವುದು ವಿಶಿಷ್ಟತೆಯಾಗಿದೆ. ಸಹಕಾರಿ ಸಂಘಗಳ ತತ್ವದಡಿ ಸಂಘ ಸ್ಥಾಪಿತಗೊಂಡಿದ್ದು ಅತೀ ಹೆಚ್ಚು ಸಂಖ್ಯಾಬಲದಲ್ಲಿ ನೌಕರ ಸದಸ್ಯರನ್ನು ಹೊಂದಿದೆ. ನೌಕರರ ಹಿತಚಿಂತನೆಗೆ ಸಂಬಂಧಪಟ್ಟಂತೆ ಚರ್ಚೆ ನಡೆಯುವ ಸಂದರ್ಭದಲ್ಲಿ ನಮ್ಮ ಸಂಘಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿ ಹಲವು ಬಾರಿ ಮನವಿಪತ್ರ ಸಲ್ಲಿಸಲಾಗಿದೆ.
ನಾಡಿನ ಜಟಿಲ ಸಮಸ್ಯೆ ಬಗೆಹರಿಸುವ ಸಂದರ್ಭದಲ್ಲಿ ಸರಕಾರ ನಾಡಿನ ಎಲ್ಲ ಸಂಘ ಸಂಸ್ಥೆಗಳು, ಹಿರಿಯ ಸಾಹಿತಿಗಳು, ಬುದ್ಧಿಜೀವಿಗಳು ವಿಪಕ್ಷ ಸಹಿತ ಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಕರೆದು ಸಲಹೆ ಪಡೆದು ನಿರ್ಧಾರ ತೆಗೆದುಕೊಳ್ಳುತ್ತದೆ. ಆದರೆ ಸಾರಿಗೆ ಸಂಸ್ಥೆಯಲ್ಲಿ ಅತ್ಯಂತ ಜಟಿಲ ಹಾಗೂ ಜ್ವಲಂತ ಸಮಸ್ಯೆಯಾಗಿರುವ ವೇತನ ಹಾಗೂ ಪಿಂಚಣಿ ವಿಷಯದಲ್ಲಿ ಕೇವಲ ಎರಡು ತಂಡಗಳನ್ನು ಕರೆದು ಸಭೆ ನಡೆಸಿ ಕ್ರಮಕೈಗೊಳ್ಳಲು ಮುಂದಾಗಿದೆ.
ಈ ಕಾಟಾಚಾರದ ಸಭೆಯಿಂದ ಸಾರಿಗೆ ನೌಕರರಿಗೆ ನಿಜವಾಗಿಯೂ ನ್ಯಾಯ ಸಿಗುವುದಿಲ್ಲ. ಈ ಸಭೆಯೂ ಸಹ ಪರಿಪೂರ್ಣತೆ ಪಡೆದುಕೊಳ್ಳುವುದಿಲ್ಲ. ಆದ್ದರಿಂದ ಕಾರ್ಮಿಕ ಸಂಘಗಳ ಜತೆಗೆ ಸರಕಾರದ ಸಹಕಾರ ಸಂಘಗಳ ಕಾಯ್ದೆಯಡಿಯಲ್ಲಿ ನೋಂದಾಯಿತಗೊಂಡಿರುವ ಸಂಘಗಳನ್ನು ಸಹ ಮಾತುಕತೆಗೆ ಕರೆಯಬೇಕು ಎಂದು ಎಂಡಿ ಅವರಲ್ಲಿ ಮತ್ತೊಮ್ಮೆ ಉಪಾಧ್ಯಕ್ಷ ರಫೀಕ ಅಹ್ಮದ್ ನಾಗನೂರ, ಖಜಾಂಚಿ ರಮೇಶ ಮೋರೆ, ಪ್ರಧಾನ ಕಾರ್ಯದರ್ಶಿ ತಿಪ್ಪೇಶ್ವರ ಅಣಜಿ ಮನವಿ ಮಾಡಿದ್ದಾರೆ.