NWKRTC: ನೌಕರರ ಪರ ಕಾನೂನು ಹೋರಾಟಕ್ಕೆ ನಿಂತ ಬೆಳಗಾವಿ ಸಾರಿಗೆ ಡಿಸಿ-ಇತರ ವಿಭಾಗಗಳಿಗೆ ಮಾದರಿಯಾದ ಡಿಸಿ ನಡೆ

ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬೆಳಗಾವಿ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ನೌಕರರಿಗೆ ಅನುಕೂಲಕರವಾದ ರೀತಿಯಲ್ಲಿ ಸುತ್ತೋಲೆವೊಂದನ್ನು ಹೊರಡಿಸಿದ್ದು ಇದರಂತೆ ನಮ್ಮ ವಿಭಾಗದಲ್ಲೂ ಹೊರಡಿಸಿ ಎಂದು ನೌಕರರು ಧಾರವಾಡ ಡಿಸಿಯಲ್ಲಿ ಮನವಿ ಮಾಡಿದ್ದಾರೆ.

ಬೆಳಗಾವಿ ಸಾರಿಗೆ ಡಿಸಿ ಹೊರಡಿಸಿರುವ ಸುತ್ತೋಲೆಯಲ್ಲಿ ಅಂತ ಮಹತ್ವ ಏನಿದೆ ಎಂದು ನೌಕರರಿಗೆ ಕುತೂಹಲವಿರಬಹುದು. ಹೌದು! ಈ ಸಾರಿಗೆ ಡಿಸಿ ನೌಕರರಿಗೆ ಆಗುತ್ತಿರುವ ಕಾನೂನು ತೊಡಕುಗಳ ನಿವಾರಣೆ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ.
ಅದೇರೀತಿ ನಮ್ಮ ಧಾರವಾಡ ಗ್ರಾಮೀಣ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳಲ್ಲಿ ನೌಕರರ ಪರವಾಗಿ ಒಂದು ಮನವಿ ಮಾಡುತ್ತಿದ್ದೇವೆ. ಬೆಳಗಾವಿ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ಹೊರಡಿಸಿರುವ ಸುತ್ತೋಲೆಯಂತೆ ನಮ್ಮ ವಿಭಾಗದಲ್ಲಿ ಕೂಡ ನೌಕರರಿಗೆ ಅನುಕೂಲವಾಗುವ ರೀತಿಯಲ್ಲಿ ನೀವು ಸುತ್ತೋಲೆ ಹೊರಡಿಸಿ ಎಂದು ಮನವಿ ಮಾಡಿದ್ದಾರೆ.
ಅದು ಡ್ಯೂಟಿ ಮೇಲೆ ಚಾಲನಾ ಸಿಬ್ಬಂದಿಯ ತಪ್ಪಿಲ್ಲದಿದ್ದರೂ ಆಗುವ ಸಣ್ಣ ಪುಟ್ಟ ಅಪಘಾತಗಳಿಗೆ ನೌಕರರನ್ನೇ ಹೊಣೆ ಮಾಡಲಾಗುತ್ತಿದೆ. ಇನ್ನು ನೌಕರರ ತಪ್ಪು ಇಲ್ಲದಿದ್ದರೂ ಕೂಡ ದೂರು ತೆಗೆದುಕೊಳ್ಳುವಾಗ ಪೊಲೀಸ್ ಠಾಣೆಯಲ್ಲಿ ನಿರಾಕರಿಸುವ ಸಂಭವ ಜಾಸ್ತಿ ಇದೆ.
ಅಲ್ಲದೆ ಕಾನೂನು ರೀತಿಯಲ್ಲಿ ಹೋರಾಡಲು ನಮ್ಮ ನೌಕರರಿಗೆ ಇದರಿಂದ ಭಾರಿ ತೊಡಕಾಗುತ್ತಿದೆ. ಹೀಗಾಗಿ ನೌಕರರಿಗೆ ಸಹಾಯವಾಗುವ ರೀತಿಯಲ್ಲಿ ಸಂಸ್ಥೆಯ ವತಿಯಿಂದಲೇ ವಕೀಲರನ್ನು ಗುರುತಿಸಿ ಆ ವಕೀಲರ ಹೆಸರುಗಳನ್ನು ಘಟಕಗಳ ನೋಟಿಸ್ ಬೋರ್ಡ್‌ಗಳಲ್ಲಿ ಹಾಕಿಸಿದ್ದಾರೆ ಬೆಳಗಾವಿಯ ಡಿಸಿ.
ಈ ಬೆಳಗಾವಿ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿಗಳು ತೆಗೆದುಕೊಂಡಿರುವ ನೌಕರರ ಪರ ನಿರ್ಧಾರದಂತೆ ಧಾರವಾಡ ಗ್ರಾಮೀಣ ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣ ಅಧಿಕಾರಿಗಳಾದ ತಾವು ಕೂಡ ನಿಮ್ಮ ನೌಕರರ ಪರವಾಗಿ ಇಂಥ ನಿರ್ಧಾರ ತೆಗೆದುಕೊಳ್ಳುವ ಮೂಲಕ ನೌಕರರಿಗೆ ಅನುಕೂಲ ಮಾಡಿಕೊಡಬೇಕು ಎಂದು ನೌಕರರೊಬ್ಬರು ಕಳಕಳಿಯ ಮನವಿ ಮಾಡಿದ್ದಾರೆ.
ಇನ್ನು ಬೆಳಗಾವಿ ವಿಭಾಗದ ವಿಭಾಗೀಯ ನಿಯಂತ್ರಣ ಅಧಿಕಾರಿ ನೌಕರರಿಗೆ ಕಾನೂನು ಹೋರಾಟಕ್ಕೆ ಅನುಕೂಲವಾಗುವಂತೆ ತಮ್ಮ ವಿಭಾಗ ವ್ಯಾಪ್ತಿಗೆ ಬರುವ ಎಲ್ಲ ಡಿಪೋಗಳ ಘಟಕ ವ್ಯವಸ್ಥಾಪಕರಿಗೆ ಒಂದು ಸೂಚನೆ ಹೊರಡಿಸಿದ್ದು, ಘಟಕಗಳ ಸೂಚನಾ ಫಲಕದಲ್ಲಿ ಘಟಕ ವ್ಯಾಪ್ತಿಯಲ್ಲಿ ಬರುವ ವಕೀಲರ ಹೆಸರುಗಳು ಫೋನ್ ನಂಬರ್ ಸಹಿತ ಹಾಕಬೇಕು ಎಂದು ತಿಳಿಸಿದ್ದಾರೆ.
ಅಲ್ಲದೆ ಈ ವಕೀಲರಿಂದ ಕಾನೂನು ಸಲಹೆ ಪಡೆದು ನೌಕರರು ಮಾಡದ ಅಪಘಾತದ ವೇಳೆ ನೌಕರರ ವಿರುದ್ಧ ದಾಖಲಾಗುವ ಪ್ರಕರಣಗಳಿಗೆ ಪ್ರತಿದೂರು ದಾಖಲಿಸುವುದಕ್ಕೆ ಮುಂದಾಗಬೇಕು ಎಂದು ತಿಳಿಸಿದ್ದಾರೆ. ಈ ರೀತಿಯ ಸುತ್ತೋಲೆ ಹೊರಡಿಸಿರುವ ಡಿಸಿ ನಡೆಯನ್ನು ನೌಕರರು ಮುಕ್ತಕಂಠದಿಂದ ಹೊಗಳಿದ್ದಾರೆ. ಅಲ್ಲದೆ ಇವರಂತೆ ಎಲ್ಲ ವಿಭಾಗಗದ ಅಧಿಕಾರಿಗಳಿಗೂ ಇವರ ಸುತ್ತೋಲೆ ಮಾದರಿಯಾಗಬೇಕು ಎಂದು ಮನವಿ ಮಾಡಿದ್ದಾರೆ.
ಜತೆಗೆ ಸಾರಿಗೆಯ ನಾಲ್ಕೂ ನಿಗಮಗಳ ಎಂಡಿಗಳು ಕೂಡ ಇದನ್ನು ಬೆಂಬಲಿಸಿ ಎಲ್ಲ ವಿಭಾಗಗಳಿಗೂ ಹಾಗೂ ಘಟಕಗಳಿಗೂ ಇದೇರೀತಿ ಸುತ್ತೋಲೆ ಹೊರಡಿಸುವಂತೆ ಆದೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.


Related









