ಧಾರವಾಡ: ಸಮವಸ್ತ್ರವನ್ನು ಮೇಲ್ವಿಚಾರಕರು/ಸಿಬ್ಬಂದಿಗಳು ಕಡ್ಡಾಯವಾಗಿ ಧರಿಸಬೇಕು ಒಂದು ವೇಳೆ ಧರಿಸದೆ ಇದ್ದಲ್ಲಿ ಅಂಥವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಧಾರವಾಡ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಧಾರವಾಡ (ಗ್ರಾ) ವಿಭಾಗ ಎಲ್ಲ ಘಟಕ ವ್ಯವಸ್ಥಾಪಕರು, ಧಾರವಾಡ, ಸವದತ್ತಿ, ರಾಮದುರ್ಗ, ಹಳಿಯಾಳ ಮತ್ತು ದಾಂಡೇಲಿ ಘಟಕ ವ್ಯವಸ್ಥಾಪಕರು ಈ ಬಗ್ಗೆ ಸಮರ್ಪಕ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ವ್ಯವಸ್ಥಾಪಕ ನಿರ್ದೇಶಕರೂ ಆದ ಸೂಕ್ತಾಧಿಕಾರಿಗಳು ವಿಭಾಗದಲ್ಲಿ ಸಮವಸ್ತ್ರ ಹೊಂದಿರುವ ಮೇಲ್ವಿಚಾರಕರು/ ಸಿಬ್ಬಂದಿಗಳು ನಿಯಮಿತವಾಗಿ ಸಮವಸ್ತ್ರಗಳನ್ನು ಕಡ್ಡಾಯವಾಗಿ ಧರಿಸುವ ಕುರಿತು ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದ್ದಾರೆ.
ಆದ್ದರಿಂದ ಘಟಕಗಳಲ್ಲಿ ಸಮವಸ್ತ್ರ ಹೊಂದಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರ ಮೇಲ್ವಿಚಾರಕ ಸಿಬ್ಬಂದಿಗಳು, ಚಾಲನಾ ಸಿಬ್ಬಂದಿಗಳು ಹಾಗೂ ಸಮವಸ್ತ್ರವಿರುವ ಇತರೆ ಸಿಬ್ಬಂದಿಗಳು ಕಡ್ಡಾಯವಾಗಿ ನಿಗದಿಪಡಿಸಿರುವ ಸಮವಸ್ತ್ರಗಳನ್ನು ಧರಿಸಿ ಕರ್ತವ್ಯಕ್ಕೆ ಹಾಜರಾಗಬೇಕು.
ಅಲ್ಲದೆ ಕರ್ತವ್ಯದ ಅವಧಿ ಮುಗಿಯುವವರೆಗೂ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಿರತಕ್ಕದ್ದು, ಈ ಆದೇಶವನ್ನು ಉಲ್ಲಂಘನೆ ಮಾಡುವ ಸಿಬ್ಬಂದಿಗಳಿಗೆ ಘಟಕ ವ್ಯವಸ್ಥಾಪಕರು ಸೂಕ್ತ ಕಟ್ಟುನಿಟ್ಟಿನ ತಿಳಿವಳಿಕೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಿದ್ದಾರೆ.
ಇನ್ನು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಖು. ಈ ಆದೇಶದ ನಿರ್ದೇಶನಗಳನ್ನು ಉಲ್ಲಂಘನೆ ಮಾಡುವ ಸಂಬಂಧಿಸಿದ ಮೇಲ್ವಿಚಾರಕ / ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ವರದಿಯನ್ನು ಮುಂದಿನ ಕ್ರಮಕ್ಕಾಗಿ ಕಚೇರಿಗೆ ಕಳುಹಿಸಬೇಕು ಎಂದು ಧಾರವಾಡ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Related
