NEWSನಮ್ಮಜಿಲ್ಲೆ

NWKRTC ಹಾವೇರಿ: ದಿನನಿತ್ಯದ ಕರ್ತವ್ಯದಲ್ಲಿ ಚಾಲನಾ ಸಿಬ್ಬಂದಿಗಳಿಗೆ ಶಿಸ್ತು, ಸಂಯಮ ಬಹಳ ಮುಖ್ಯ- ಡಿಟಿಒ ಅಶೋಕ ಪಾಟೀಲ್

ವಿಜಯಪಥ ಸಮಗ್ರ ಸುದ್ದಿ

ಹಾವೇರಿ: ಸಂಸ್ಥೆಯ ಚಾಲಕರು ದಿನನಿತ್ಯದ ಕರ್ತವ್ಯದಲ್ಲಿ ಶಿಸ್ತು, ಸಂಯಮವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾವೇರಿ ವಿಭಾಗದ ವಿಭಾಗೀಯ ಸಂಚಾರ ಅಧಿಕಾರಿ ಅಶೋಕ ಪಾಟೀಲ್ ಸಲಹೆ ನೀಡಿದರು.

ಇಂದು ಸಂಸ್ಥೆಯ ಹಾವೇರಿ ವಿಭಾಗದ ಹಾವೇರಿ ಘಟಕದಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2026 ಮತ್ತು ಇಂಧನ ಉಳಿತಾಯ ಮಾಸಿಕ-2026ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ರಸ್ತೆ ಸುರಕ್ಷತೆ ಜೀವನ ರಕ್ಷಣೆ ಎಂಬ ಘೋಷ ವಾಕ್ಯದೊಂದಿಗೆ ಮತ್ತು ಇಂಧನ ಉಳಿತಾಯ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ-2026ಅನ್ನು 16.01.2026 ರಿಂದ 15.02.2026ರವರೆಗೆ ವಿಭಾಗದ ಎಲ್ಲ ಘಟಕಗಳಲ್ಲಿ ಆಚರಣೆ ಮಾಡಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರ ಎಂಬ ದಾಸರ ವಾಣಿಯನ್ನು ತಿಳಿಸಿ, ವರ್ಷದ ಮೊದಲ ತಿಂಗಳಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯನ್ನು ಆಯೋಜನೆ ಮಾಡಿ ಚಾಲನಾ ಸಿಬ್ಬಂದಿಗಳಿಗೆ ಸುರಕ್ಷತೆಯ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ವರ್ಷ ಪೂರ್ತಿ ಅಪಘಾತಗಳನ್ನು ತಡೆಯುವಂತೆ, ಅಪಘಾತಗಳು ಸಹಜವಾಗಿ ಮಾನವ ದೋಷದಿಂದ ಸಂಭವಿಸುವುದರಿಂದ ಪ್ರತಿ ವರ್ಷ ಅಪಘಾತದಿಂದಲೇ ಸುಮಾರು 2 ಲಕ್ಷ ಜನ ಮರಣ ಹೊಂತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಇನ್ನು ಅಪಘಾತದಿಂದ ಆಗುವ ಸಾವು ನೋವುಗಳಿಂದ ಅವರ ಕುಟುಂಬಗಳು ಅನುಭವಿಸುವ ನೋವು ಶತ್ರುಗಳಿಗೂ ಬೇಡ. ಹೀಗಾಗಿ ಅಪಘಾತ ರಹಿತ ಸೇವೆ ಸಲ್ಲಿಸುವುದರ ಮೂಲಕ ಸಾರ್ವಜನಿಕರಿಗೆ ಉತ್ತಮ ಸಾರಿಗೆ ಸೇವೆ ಸಲ್ಲಿಸುವುದು ನಮ್ಮ ಆದ್ಯತೆಯಾಗಬೇಕು ಎಂದು ಕಿವಿ ಮಾತು ಹೇಳಿದರು.

ವಿಭಾಗೀಯ ತಾಂತ್ರಿಕ ಅಭಿಯಂತರ ಕೆ.ಆರ್.ನಾಯ್ಕ ಮಾತನಾಡಿ, ಇಂಧನ ದ್ರವ ರೂಪದ ಬಂಗಾರ. ಅದನ್ನು ಜೋಪಾನವಾಘಿ ಬಳಸುವುದು ನಮ್ಮ ಕರ್ತವ್ಯವಾಗಿದೆ. ಹೀಗಾಗಿ ವಾಹನ ಚಾಲನಾ ನಿಯಮಗಳನ್ನು ಅರಿತು ಚಾಲನೆ ಮಾಡಿದರೆ ಇಂಧನ ದ್ರವ ರೂಪದ ಬಂಗಾರದ ಕ್ಷಮತೆಯನ್ನು ಹೆಚ್ಚಿಸಬಹುದು ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡುತ್ತಾ, ಶಾಲಾ ದಿನಗಳಲ್ಲಿ ಸಾರಿಗೆ ಸಂಸ್ಥೆಯೊಂದಿಗಿನ ಅವಿನಾಭವ ಸಂಬಂಧ ಹಾಗೂ ಸಂಸ್ಥೆ ಸುರಕ್ಷತೆ ಮತ್ತು ಭದ್ರತೆಯ ಸಂಕೇತವಾಗಿದೆ. ಇನ್ನು ದೇಶದಲ್ಲಿ ಕರ್ನಾಟಕ ಸಾರಿಗೆ ನಿಗಮಗಳಲ್ಲಿನ ವಾಹನಗಳ ಪ್ರಸ್ತುತ ವ್ಯವಸ್ಥೆ ಮತ್ತು ದೇಶದಲ್ಲಿ ಸಾರಿಗೆ ಸೌಲಭ್ಯ ಒದಗಿಸುತ್ತಿರುವುದು ಜತೆಗೆ ಸಂಸ್ಥೆ ಮೊದಲ ಸ್ಥಾನದಲ್ಲಿರುವುದನ್ನು ಶ್ಲಾಘಿಸಿದ ಅವರು, ಸುರಕ್ಷತೆಯಿಂದ ಚಾಲನೆ ಮಾಡಿ ಕುಟುಂಬ ಮತ್ತು ಪ್ರಯಾಣಿಕರ ಹಿತವನ್ನು ಕಾಯುವಂತೆ ಚಾಲಕರಿಗೆ ಕಿವಿಮಾತು ಹೇಳಿದರು.

ಅಶೋಕ ಲೈಲ್ಯಾಂಡ್‌ನ ಸರ್ವೀಸ್ ಇಂಜಿನಿಯರ್ ಮುಕಂದರ್ ಮಾತನಾಡಿ, ಇಂಧನದ ಮಹತ್ವ ಮತ್ತು ವಾಹನಗಳ ಮೈಲೇಜ್ ಹೆಚ್ಚಿಸುವ ಕುರಿತು ಚಾಲನಾ ಸಿಬ್ಬಂದಿಗಳಿಗೆ ತಿಳುವಳಿಕೆ ನೀಡಿದರು. ಚಾಲನೆಯ ಸಮಯದಲ್ಲಿ ನಿಮ್ಮ ಕುಟುಂಬದ ಒಂದು ಫೋಟೊವನ್ನು ಮುಂದೆ ಇಟ್ಟುಕೊಂಡು ಚಾಲನೆ ಮಾಡಿದಲ್ಲಿ ಸುರಕ್ಷತೆಯ ಚಾಲನೆಗೆ ಅನುವಾಗುವುದರ ಬಗ್ಗೆ ಮತ್ತು ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಕುಮಾರ ಜಿ. ಮಾತನಾಡಿ, ಮನೆಯಿಂದ ನಾವು ಪ್ರತಿನಿತ್ಯ ಕೆಲಸದ ಮೇಲೆ ಹೋರ ಹೋಗುವಾಗ ಈ ದಿನ ಸುಗಮವಾಗಿ ಸಾಗಲಿ ಎಂದು ದೇವರನ್ನು ಪ್ರಾರ್ಥಿಸಿ ಹೋಗುವಂತೆ ಪ್ರತಿ ವರ್ಷ ಮೊದಲ ತಿಂಗಳಲ್ಲಿ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಆಯೋಜನೆ ಮಾಡಿ ವರ್ಷವಿಡಿ ಅಪಘಾತಗಳು ಸಂಭವಿಸದಂತೆ ಕ್ರಮ ವಹಿಸಲು ತಿಳುವಳಿಕೆ ನೀಡುತ್ತದೆ ಎಂದರು.

ಇನ್ನು ಇದರ ಜತೆಗೆ ಸಂಸ್ಥೆಯ ಎಲ್ಲ ಚಾಲನಾ ಸಿಬ್ಬಂದಿಗಳು ಅಪಘಾತ ಮತ್ತು ಅಪರಾಧ ರಹಿತ ಚಾಲನೆ ಮಾಡಿ ಬೆಳ್ಳಿ ಮತ್ತು ಮುಖ್ಯ ಮಂತ್ರಿಗಳ ಚಿನ್ನದ ಪದಕವನ್ನು ಪಡೆಯುವ ಕಡೆ ಆಸಕ್ತಿದಾಯಕವಾಗಿ ಕರ್ತವ್ಯ ನಿರ್ವಹಿಸಿ ಹಾಗೂ ಅಪಘಾತಗಳಿಂದಾಗುವ ಆರ್ಥಿಕ ನಷ್ಟವನ್ನು ತಿಳಿಸಿ, ನಮ್ಮ ಚಾಲಕರು ಅಪಘಾತ ರಹಿತ ಸೇವೆ ಮೂಲಕ ಇನ್ನೂ ಹೆಚ್ಚು ಜನಸ್ನೇಹಿ ಆಗಬೇಕು ಎಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಹೋಸದಾಗಿ ಸಂಸ್ಥೆಗೆ ಚಾಲಕ ಹುದ್ದೆಗೆ ಆಯ್ಕೆಯಾದ ಎಲ್ಲಾ ಚಾಲನಾ ಸಿಬ್ಬಂದಿಗಳಿಗೆ ಶುಭಾಶಯ ತಿಳಿಸಿದರು.

ಸಂಸ್ಥೆಯ ಅಧಕಾರಿ ಸಿಬ್ಬಂದಿಗಳಾದ ಚಂದ್ರು, ಪ್ರಶಾಂತ, ಮಲ್ಲಿಕಾರ್ಜುನ ಹಿಂಚಿಗೇರಿ, ಈರಪ್ಪ ಕಡ್ಲಿಮಟ್ಟಿ, ವಿಭಾಗದ ಆಡಳಿತಾಧಿಕಾರಿ, ಉಗ್ರಾಣಾಧಿಕಾರಿ, ಸಹಾಯಕ ಲೆಕ್ಕಾಧಿಕಾರಿ, ಟಿ.ಜೆ. ನದಾಫ, ಕೃಷ್ಣ ರಾಮಣ್ಣವರ, ಗೀತಾ ಸರ್ವೇದ, ಸುಪ್ರೀತ್ ಬೂದಿ, ಆರ್.ಎಸ್. ಮಾಸೂರು, ಕುಮಾರ, ಗಣೇಶ ಮತ್ತು ಘಟಕದ ಅನೇಕ ಚಾಲನಾ ಮತ್ತು ತಾಂತ್ರಿಕ ಸಿಬ್ಬಂದಿಗಳು ಇದ್ದರು.

Megha
the authorMegha

Leave a Reply

error: Content is protected !!