ಬೆಂಗಳೂರು: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಂಡಿ ಭರತ್ ಎಸ್ ವರ್ಗಾವಣೆಗೊಂಡಿದ್ದು, ನೂತನ ವ್ಯವಸ್ಥಾಪಕ ನಿರ್ದೇಶಕಿಯಾಗಿ ಐಎಎಸ್ ಅಧಿಕಾರಿ ಎಂ.ಪ್ರಿಯಾಂಗಾ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಗುರುವಾರ ಎಂ.ಪ್ರಿಯಾಂಗ ಸೇರಿದಂತೆ ಐದು ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಲೋಕಸಭೆ ಚುನಾವಣೆಯ ಕಾವು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದೆಲ್ಲದರ ಮಧ್ಯೆ ಈ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಾಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಎಂಡಿಯಾಗಿರುವ ಭರತ್ ಎಸ್. ಅವರನ್ನು ಗದಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿಯಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದ್ದು, ತೆರವಾಗಿದ್ದ NWKRTC ಎಂಡಿ ಸ್ಥಾನಕ್ಕೆ ಅವರ ಪತ್ನಿ ಪ್ರಿಯಾಂಗಾ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಭರತ್ ಅವರು NWKRTC ನಿಗಮಕ್ಕೆ ಬಂದ ಮೇಲೆ ನೌಕರರ ಸ್ನೇಹಿಯಾಗಿ ಕೆಲಸ ಮಾಡಿದ್ದು, ಸಂಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ತರುವ ಮೂಲಕ ನೌಕರರ ಸಮಸ್ಯೆಗೆ ಸ್ಪಂದಿಸಿದ್ದರು. ಇಂಥ ಅಧಿಕಾರಿಯ ಪತ್ನಿಯಾಗಿರುವ ಪ್ರಿಯಾಂಗಾ ಅವರು ಕೂಡ ನೌಕರರ ಸ್ನೇಹಿಯಾಗಿಯೇ ಕರ್ತವ್ಯ ನಿರ್ವಹಿಸಲಿದ್ದಾರೆ ಎಂಬ ಆಶಯವನ್ನು ನೌಕರರು ವ್ಯಕ್ತಪಡಿಸಿದ್ದಾರೆ.
ಐವರು ಐಎಎಸ್ ಅಧಿಕಾರಿಗಳ ವರ್ಗಾವಣೆ: 1)ಡಾ. ಅಜಯ್ ನಾಗಭೂಷಣ್ ಎಂ.ಎನ್: ಕಾರ್ಯದರ್ಶಿ, ಪಶುಸಂಗೋಪನಾ ಇಲಾಖೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಹುದ್ದೆ ಹೆಚ್ಚುವರಿ ಹೊಣೆ. 2) ತುಳಸ ಮದ್ದಿನೇನಿ: ಕಾರ್ಯದರ್ಶಿ, ಡಿಪಿಎಆರ್. 3)ಅರ್ಚನಾ ಎಂ.ಎಸ್: ಮುಖ್ಯ ಸಂಪಾದಕಿ, ಕರ್ನಾಟಕ ಗೆಜೆಟಿಯರ್ ಇಲಾಖೆ. 4) ಪ್ರಿಯಾಂಗ ಎಂ: ಎಂಡಿ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ. 5) ಭರತ್ ಎಸ್: ಸಿಇಒ, ಜಿ.ಪಂ. ಗದಗ ವರ್ಗಾವಣೆ ಮಾಡಲಾಗಿದೆ.