ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳು/ನೌಕರರಿಗೆ ಮೂಲ ತುಟ್ಟಿಭತ್ಯೆ, ಪರಿಷ್ಕೃತ ಮನೆ ಬಾಡಿಗೆ ಭತ್ಯೆ ಹಾಗೂ ನಗರ ಪರಿಹಾರ ಭತ್ಯೆ ಹಿಂಬಾಕಿ ಜತೆಗೆ 01.07.2024 ರಿಂದ ಹಾಗೂ 01.01.2025 ರಿಂದ ಪರಿಷ್ಕರಿಸಲಾದ ತುಟ್ಟಿಭತ್ಯೆ ದರಗಳ ಹಿಂಬಾಕಿ ಮೊತ್ತ ಪಾವತಿ ಬಗ್ಗೆ ಸಂಸ್ಥೆ ಎಂಡಿ ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಇದೇ ಅ.17ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಪ್ರಿಯಾಂಗಾ ಅವರು ಆದೇಶ ಹೊರಡಿಸಿದ್ದು, ಇದನ್ನು ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಪ್ರಾದೇಶಿಕ ಕಾರ್ಯಾಗಾರ, ಕಾರ್ಯ ವ್ಯಸ್ಥಾಪಕರು, ಕಾರ್ಯ ನಿರ್ವಾಹಕ ಅಭಿಯಂತರರು ಪಾಲನೆ ಮಾಡುವಂತೆ ಸೂಚಿಸಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ಆಗಸ್ಟ್-2024 ರಿಂದ ಜೂನ್-2025ರ ವರೆಗಿನ 11 ತಿಂಗಳುಗಳ ಅವಧಿಯಲ್ಲಿ ಸೇವಾ ನಿರತ ಮತ್ತು ಸೇವಾ ವಿಮುಕ್ತಿ ಹೊಂದಿದ ಅಧಿಕಾರಿ/ ನೌಕರರಿಗೆ ಮೂಲ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆಗಳ ಮತ್ತು ತುಟ್ಟಿ ಭತ್ಯೆ ಹಿಂಬಾಕಿಗಳನ್ನು ಪಾವತಿಸುವುದು ಬಾಕಿ ಇದೆ.
ಇನ್ನು ಈಗಾಗಲೇ ಆಗಸ್ಟ್ -2024 ಈ 1 ತಿಂಗಳ ಹಿಂಬಾಕಿ ಪಾವತಿಸಲಾಗಿದೆ. ಅದರಂತೆ ಸೆಪ್ಟೆಂಬರ್-2024 ರ ಮಾಹೆಯ ಹಿಂಬಾಕಿ ಮೊತ್ತವನ್ನು ಈ ಕೆಳಗಿನಂತೆ ಪಾವತಿಸಲು ಸೂಕ್ತಾಧಿಕಾರಿಗಳು ಆದೇಶಿಸಿದ್ದಾರೆ.
ಪ್ರಸ್ತುತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ ಸಿಬ್ಬಂದಿಗಳ ಸೆಪ್ಟೆಂಬರ್-2024ರ ಮಾಹೆಯ ಒಂದು ತಿಂಗಳ ಈ ಮೇಲಿನ ಹಿಂಬಾಕಿ ಮೊತ್ತವನ್ನು ಅಕ್ಟೋಬರ್-2025ರ ವೇತನದಲ್ಲಿ ಸೇರಿಸಿ ಪಾವತಿಸುವುದು. ಇನ್ನೂಳಿದ 9 ತಿಂಗಳುಗಳ ಹಿಂಬಾಕಿ ಪಾವತಿಯ ಕುರಿತು ನಂತರ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಅಕ್ಟೋಬರ್-2025ರ ಮಾಹೆಯಿಂದ ಮುಂದಕ್ಕೆ ಸೇವಾ ವಿಮುಕ್ತಿ ಹೊಂದುವವರಿಗೆ ಸೆಪ್ಟೆಂಬರ್-2024ರ ರಿಂದ ಜೂನ್-2025ರ ವರೆಗಿನ 10 ತಿಂಗಳುಗಳ ಹಿಂಬಾಕಿ ಮೊತ್ತವನ್ನು ನಿವೃತ್ತ ಮಾಹೆಯಲ್ಲಿ ವೇತನದಲ್ಲಿ ಸೇರಿಸಿ ಪಾವತಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.

Related









