ಬೆಂಗಳೂರು: ರಾಜ್ಯ ಹೈಕೋರ್ಟ್‌ಗೆ ನೇಮಕಗೊಂಡ ಐವರು ಹೆಚ್ಚುವರಿ ನ್ಯಾಯಮೂರ್ತಿಗಳು ಪ್ರಮಾಣ ವಚನ ಸ್ವೀಕರಿಸಿದರು.
ರಾಜಭವನದ ಗಾಜಿನ ಮನೆಯ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿಗಳಾಗಿ ಪದೋನ್ನತಿ ಹೊಂದಿರುವ ನ್ಯಾ.ಅನಿಲ್ ಭೀಮಸೇನ ಕಟ್ಟಿ, ನ್ಯಾ. ಗುರುಸಿದ್ದಯ್ಯ ಬಸವರಾಜ, ನ್ಯಾ. ಚಂದ್ರಶೇಖರ ಮೃತ್ಯುಂಜಯ ಜೋಶಿ, ನ್ಯಾ. ಉಮೇಶ ಮಂಜುನಾಥ ಭಟ್ಟ ಅಡಿಗ ಹಾಗೂ ನ್ಯಾ. ತಲಕಾಡು ಗಿರಿಗೌಡ ಶಿವಶಂಕರೇಗೌಡ ಪ್ರಮಾಣ ವಚನ ಸ್ವೀಕರಿಸಿದರು.
ಈ ಐವರು ನ್ಯಾಯಮೂರ್ತಿಗಳಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅಧಿಕಾರ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು. ಈ ಐವರ ಪದೋನ್ನತಿಯಿಂದ ಹೈಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ ಪ್ರಸ್ತುತ 48ಕ್ಕೆ ಏರಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ, ಶಾಸಕರು, ಹೈಕೋರ್ಟ್ ನ್ಯಾಯಮೂರ್ತಿಗಳು, ವಕೀಲರು ಈ ವೇಳೆ ಉಪಸ್ಥಿತರಿದ್ದರು.