ಬೆಂಗಳೂರು: ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣ ಸಂಭದಿಸಿದಂತೆ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಅವರಲ್ಲಿ ಒಬ್ಬನ ಬಗ್ಗೆ ತೀವ್ರವಾದ ಅನುಮಾನ ವಿರುವುದರಿಂದ ಆತನ ವಿಚಾರಣೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.
ಮೂವರಲ್ಲಿ ಕಿರಣ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಈತನೇ ಮಹಿಳಾ ಅಧಿಕಾರಿಯನ್ನು ಕೊಲೆ ಮಾಡಿದ್ದಾನೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಸುಬ್ರಮಣ್ಯಪುರ ಪೊಲೀಸರು ಪ್ರತಿಮಾ ಅವರ ಕೊಲೆಗೆ ಸಂಬಂಧಿಸಿದಂತೆ ಕಿರಣ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಈತ ಪ್ರತಿಮಾ ಅವರ ಹಳೆ ಡ್ರೈವರ್.
ಸದ್ಯ ಹೊರಬಿದ್ದ ಮಾಹಿತಿ ಪ್ರಕಾರ, ವಿಚಾರಣೆ ನಡೆಸಿದ್ದ ವೇಳೆ ಕೊಲೆ ಮಾಡಿದ್ದು ಒಬ್ಬನೇ ಎಂಬುದು ಬಯಲಿಗೆ ಬಂದಿದೆ. ಕಿರಣ್ ಎಂಬಾತನೇ ಈ ಕೊಲೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಕಿರಣ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿಮಾ ಒಂದು ವಾರದ ಹಿಂದೆಯಷ್ಟೇ ಕಿರಣ್‌ನನ್ನು ಕೆಲಸದಿಂದ ತೆಗೆದಿದ್ದರು. ಕೆಲ ವಿಚಾರಗಳಿಗೆ ಪ್ರತಿಮಾ ಮತ್ತು ಕಿರಣ್ ನಡುವೆ ಭಿನ್ನಾಭಿಪ್ರಾಯ ಬಂದಿತ್ತು. ಕೆಲಸದಿಂದ ವಜಾಗೊಳಿಸಿದ್ದಕ್ಕೆ ಕೋಪಗೊಂಡಿದ್ದ ಕಿರಣ್ ಈ ಕೃತ್ಯ ವೆಸಗಿದ್ದಾನೆ ಎನ್ನಲಾಗುತ್ತಿದೆ.
ಪ್ರತಿಮಾ ಮನೆಗೆ ಬಂದು ಕೊಲೆ ಮಾಡಿರುವುದಾಗಿ ಮಾಹಿತಿ ಹೊರಬಿದ್ದಿದೆ. ಸದ್ಯ ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ.