ಮೀಸಲಾತಿ ಪ್ರಮಾಣ ಶೆ.12ಕ್ಕೆ ಹೆಚ್ಚಿಸಲು ಸರ್ಕಾರಕ್ಕೆ ಗಡುವುಕೊಟ್ಟ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ
ಬೆಂಗಳೂರು: ಒಕ್ಕಲಿಗ ಉಪ ಪಂಗಡಗಳನ್ನು ಒಳಗೊಂಡ ರಾಜ್ಯದ ಇತರ ಹಿಂದುಳಿದ ವರ್ಗಗಳ ‘ಪ್ರವರ್ಗ–3ಎ’ಗೆ ನೀಡಲಾಗಿರುವ ಮೀಸಲಾತಿ ಪ್ರಮಾಣವನ್ನು ಮುಂಬರುವ ಜನವರಿ 23ರ ಒಳಗೆ ಶೇ. 4 ರಿಂದ ಶೇ. 12ಕ್ಕೆ ಹೆಚ್ಚಿಸಬೇಕು ಎಂದು ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ಪಟ್ಟು ಹಿಡಿದಿದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಗಡುವಿನೊಳಗೆ ಬೇಡಿಕೆ ಈಡೇರಿಸದಿದ್ದರೆ ರಾಜ್ಯವ್ಯಾಪಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಒಕ್ಕಲಿಗರ ಸಂಘದ ಆವರಣದಲ್ಲಿರುವ ಕುವೆಂಪು ಕಲಾಕ್ಷೇತ್ರದಲ್ಲಿ ಆದಿಚುಂಚನಗಿರಿ ಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಶ್ರೀ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಭಾನುವಾರ ನಡೆದ ಸಭೆಯಲ್ಲಿ ಒಕ್ಕಲಿಗ ನಾಯಕರು ಒಕ್ಕೊರಲಿನಿಂದ ಈ ಬೇಡಿಕೆ ಇಟ್ಟಿದ್ದಾರೆ.
ಸಭೆಯಲ್ಲಿದ್ದ ಕಂದಾಯ ಸಚಿವ ಆರ್.ಅಶೋಕ ಅವರಿಗೆ ನಿರ್ಮಲಾನಂದನಾಥ ಸ್ವಾಮೀಜಿ ಹಕ್ಕೊತ್ತಾಯದ ಮನವಿಯನ್ನು ನೀಡಿದರು. ಮೀಸಲಾತಿ ಪ್ರಮಾಣ ಹೆಚ್ಚಿಸುವುದೂ ಸೇರಿದಂತೆ ಒಕ್ಕಲಿಗ ಸಮುದಾಯದ ಬೇಡಿಕೆಗಳ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸುತ್ತೇನೆ. ಸಮುದಾಯದ ಪರವಾಗಿ ನಿಲ್ಲುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅಶೋಕ ಭರವಸೆ ನೀಡಿದರು.
ರಾಜ್ಯದಲ್ಲಿ ಒಕ್ಕಲಿಗರ ಜನಸಂಖ್ಯೆ ಶೇ.16 ರಷ್ಟಿದೆ. ಆದರೆ, ಮೀಸಲಾತಿ ಶೇ 4 ರಷ್ಟು ಮಾತ್ರ. ನಾಡಿಗೇ ಆಹಾರ ಭದ್ರತೆ ಕೊಟ್ಟಿರುವ ಸಮಾಜ ನಮ್ಮದು. ನಮ್ಮ ಸಮುದಾಯದ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜನಾಂಗದ ಹಿತದೃಷ್ಟಿಯಿಂದ ಸರ್ಕಾರ ನಮಗೆ ಮೀಸಲಾತಿ ಹೆಚ್ಚಿಸಬೇಕು. ಶೇ.15ರವರೆಗೂ ಮೀಸಲಾತಿ ಹೆಚ್ಚಿಸುವ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಬೇಕು ಎಂದು ಸರ್ಕಾರವನ್ನು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಆಗ್ರಹಿಸಿದರು.
ಡಿಸೆಂಬರ್ 9 ರಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ನೇತೃತ್ವದಲ್ಲಿ, ನಮ್ಮ ಸಮುದಾಯಕ್ಕೆ ಮೀಸಲಾತಿ ಹೆಚ್ಚಿಸುವಂತೆ ಕೇಂದ್ರದ ಮೇಲೆ ಒತ್ತಡ ಹಾಕುತ್ತೇವೆ’ ಎಂದು ಸಂಸದ ಡಿ.ವಿ. ಸದಾನಂದಗೌಡ ಹೇಳಿದರು.
ನಮ್ಮ ಬೇಡಿಕೆ ಈಡೇರಿಕೆಗಾಗಿ ನಾವು ಬೀದಿಗಿಳಿಯಲು ಸಿದ್ಧರಿದ್ದೇವೆ ಎಂದಸದಾನಂದಗೌಡ ಎಸ್‌ಸಿ/ ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಇತ್ತೀಚೆಗೆ ನಿರ್ಧಾರ ಕೈಗೊಂಡಿತ್ತು. ನಮ್ಮ ಬೇಡಿಕೆ ದಾನವಲ್ಲ ಆದರೆ ನಮ್ಮ ಕಾನೂನುಬದ್ಧ ಹಕ್ಕು ಎಂದು ಪ್ರತಿಪಾದಿಸಿದರು.
ನಾನು ಆಡಳಿತ ಪಕ್ಷದವನಾಗಿದ್ದು, ಸಾರ್ವಜನಿಕವಾಗಿ ಎಲ್ಲವನ್ನು ಹೇಳದಂತೆ ತಡೆಯುತ್ತಿದೆ. ಆದರೆ ನಾನು ಈ ವಿಷಯವನ್ನು ಪ್ರಸ್ತಾಪಿಸುತ್ತೇನೆ ಎಂದು ಭರವಸೆ ನೀಡುತ್ತೇನೆ. 2012ರಲ್ಲಿ ನಾನು ಸಿಎಂ ಆಗಿದ್ದಾಗ ನಿರ್ಮಲಾನಂದನಾಥ ಸ್ವಾಮೀಜಿ ಒಕ್ಕಲಿಗ ಸಮುದಾಯದವರೊಬ್ಬರು ಸಿಎಂ ಸ್ಥಾನದಿಂದ ಕೆಳಗಿಳಿಯದಂತೆ ಹೋರಾಟ ನಡೆಸಿದ್ದರು ಎಂದು ಸ್ಮರಿಸಿದರು.
ಇನ್ನು ನಮ್ಮ ಸಮುದಾಯದ ಜನಸಂಖ್ಯೆಯ ಗಣತಿ ಮಾಡಬೇಕು. ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ್ದ ವರದಿಯಲ್ಲಿ ನಮ್ಮ ಜನಸಂಖ್ಯೆಯನ್ನು ತಿರುಚಲಾಗಿದೆ. ಒಕ್ಕಲಿಗರಿಗೆ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಶೇ.12ರಷ್ಟು ಮೀಸಲಾತಿ ಹೆಚ್ಚಿಸಬೇಕು. ಇದು ಭಿಕ್ಷೆ ಅಲ್ಲ. ನ್ಯಾಯಯುತ ಹಕ್ಕು. ಆರ್ಥಿಕವಾಗಿ ಹಿಂದುಳಿದವರಿಗೆ ಕೇಂದ್ರಸರ್ಕಾರ ಘೋಷಿಸಿರುವ ಶೇ.10 ಮೀಸಲಾತಿ ನಮ್ಮ ಸಮುದಾಯಕ್ಕೆ ಸಿಗದೇ ಅನ್ಯಾಯ ಆಗಿದೆ ಎಂದು ಒಕ್ಕಲಿಗ ನಾಯಕರು ಹೇಳಿದರು.