
ಕೋಲಾರ: ಮದನಪಲ್ಲಿ- ಬೆಂಗಳೂರು ನಡುವೆ ಸಂಚರಿಸುತ್ತಿದ್ದ ಎರಡು ಖಾಸಗಿ ಬಸ್‌ಗಳ ನಡುವೆ ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ಸಮೀಪದ ಗುಂಟಪಲ್ಲಿ ಕ್ರಾಸ್‌ನಲ್ಲಿ ಜರುಗಿದೆ.
ಅಪಘಾತದಲ್ಲಿ ಆಂಧ್ರಪ್ರದೇಶ ಮೂಲದ ಗಂಗಾಧರ ಎಂಬುವರು ಸ್ಥಳದಲ್ಲೇ ಮೃತಪಟ್ಟಿದ್ದು, ಗಾಯಗೊಂಡಿರುವ 20 ಕ್ಕೂ ಹೆಚ್ಚು ಪ್ರಯಾಣಿಕರನ್ನು ರಾಯಲ್ಪಾಡಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಮದನಪಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದನಪಲ್ಲಿಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ವೇಳೆ ಕರ್ನಾಟಕ ಗಡಿಯಲ್ಲಿ ಈ ಖಾಸಗಿ ಬಸ್‌ಗಳು ಅಪಘಾತಕ್ಕೀಡಾಗಿವೆ. ಖಾಸಗಿ ಬಸ್‌ಗಳ ಚಾಲಕರು ಅತೀ ವೇಗವಾಗಿ ಬಸ್‌ಗಳನ್ನು ಓಡಿಸುತ್ತಿರುವುದರಿಂದ ಇಂಥ ಅವಘಡಗಳು ಸಂಭವಿಸುತ್ತಿವೆ ಎಂದು ಪ್ರಯಾಣಿಕ ಶ್ರೀಸಾಯಿ ಎಂಬುವರು ತಿಳಿಸಿದ್ದಾರೆ.
ಇನ್ನು ಈ ಬಸ್‌ಗಳಿಗೆ ಕಡಿವಾಣ ಹಾಕಬೇಕಾದರೆ ಕೆಎಸ್‌ಆರ್‌ಟಿಸಿ ಹಾಗೂ ಎಪಿಎಸ್‌ಆರ್‌ಟಿಸಿ ಬಸ್‌ಗಳನ್ನು ಹೆಚ್ಚಾಗಿ ಈ ಮಾರ್ಗದಲ್ಲಿ ಬಿಡಬೇಕು ಎಂದು ಶ್ರೀಸಾಯಿ ಆಗ್ರಹಿಸಿದ್ದಾರೆ.
ಅಲ್ಲದೆ ಈ ಬಸ್‌ಗಳು ಪ್ರಯಾಣಿಸಲು ಸುರಕ್ಷಿತವಾಗಿವೆ ಹೀಗಾಗಿ ಕರ್ನಾಟಕ ಮತ್ತು ಆಂಧ್ರದ ಗಡಿಗಳಿಂದ ಅಂತಾರಾಜ್ಯ ಕೆಎಸ್‌ಆರ್‌ಟಿಸಿ ಎಪಿಎಸ್‌ಆರ್‌ಟಿಸಿ ಬಸ್ ಸೇವೆಯನ್ನು ಹೆಚ್ಚಿಸಿ ಬೆಂಗಳೂರಿನಿಂದ ಕಡಪ, ಮದನಪಲ್ಲಿ, ತಿರುಪತಿ, ಶ್ರೀಕಾಳಹಸ್ತಿಗೆ ಸುರಕ್ಷಿತ ಪ್ರಯಾಣಕ್ಕೆ ಭಾರಿ ಬೇಡಿಕೆ ಇದೆ ಎಂದು ತಿಳಿಸಿದ್ದಾರೆ.
ಅಪಘಾತ ಸಂಬಂಧ ರಾಯಲ್ಪಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.