KSRTC ನೌಕರರ ವೇತನ ಹೆಚ್ಚಳ ಸಂಬಂಧ ಸರ್ವ ಸಂಘಟನೆಗಳೊಂದಿಗೆ ಒಂದೇ ವೇದಿಕೆಯಡಿ ಸಭೆ ಆಯೋಜಿಸಿ: ಸಾರಿಗೆ ಸಚಿವರಿಗೆ ಬಿಎಂಎಸ್ ಮನವಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಬರಬೇಕಿರುವ 38 ತಿಂಗಳ ವೇತನ ಹಿಂಬಾಕಿ ಮತ್ತು 01.01.2024 ರಿಂದ ಜಾರಿಯಾಗಬೇಕಿರುವ ವೇತನ ಪರಿಷ್ಕರಣೆ ಸಂಬಂಧ ಸರ್ವ ಸಂಘಟನೆಗಳೊಂದಿಗೆ ಒಂದೇ ವೇದಿಕೆಯಡಿ ಸಭೆಯನ್ನು ಆಯೋಜಿಸಬೇಕು ಎಂದು ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.

ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಅವರಿಗೆ ನ.27ರಂದು ಮನವಿ ಸಲ್ಲಿಸಿರುವ ಒಕ್ಕೂಟದ ರಾಜ್ಯಾಧ್ಯಕ್ಷ ಸುರೇಶ್ ಎಸ್.ನಾಡಿಗೇರ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಬಿ. ದೊಡ್ಡಗೌಡನವರ ಮನವಿ ಸಲ್ಲಿಸಿದ್ದಾರೆ.
ಡಿ.13ರಂದು ಪ್ರತ್ಯೇಕವಾಗಿ ಸಭೆ ನಿಗದಿಪಡಿಸುವುದನ್ನು ಮಾರ್ಪಡಿಸಿ ಸರ್ವ ಸಂಘಟನೆಗಳೊಂದಿಗೆ ಒಂದೇ ವೇದಿಕೆಯಡಿ ಸಭೆ ಆಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ನ.26 ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದಂತೆ ಈ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ಕೂ ಸಾರಿಗೆ ನಿಗಮಗಳ ಸಮಸ್ತ ನೌಕರರಿಗೆ ಸಿಗಬೇಕಿರುವ 38 ತಿಂಗಳ ವೇತನ ಹಿಂಬಾಕಿ ಮತ್ತು 01.01.2024 ರಿಂದ ಜಾರಿಯಾಗಬೇಕಿರುವ ವೇತನ ಪರಿಷ್ಕರಣೆ ಸಂಬಂಧ ರಾಜ್ಯ ಸರ್ಕಾರ / ಆಡಳಿತ ವರ್ಗ ನೌಕರರ ಸಂಘಟನೆಗಳನ್ನು ಎರಡು ಗುಂಪುಗಳಾಗಿ ವಿಭಜಿಸಿ ಪ್ರತ್ಯೇಕವಾಗಿ ಸಭೆಗಳನ್ನು ನಡೆಸುತ್ತಿರುವುದಿಂದ ಈವರೆಗೂ ಒಮ್ಮತದ ನಿರ್ಧಾರಕ್ಕೆ ಬರಲಾಗಿಲ್ಲ.
ಅಲ್ಲದೆ ಸಾರಿಗೆ ನೌಕರರ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಾಲ್ಕೂ ಬಾರಿ ಸಭೆ ನಡೆಸಿದರೂ ನೌಕರರ ಸಮಸ್ಯೆ ಬಗೆಹರಿಯದಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ.
ಆದ್ದರಿಂದ, 38 ತಿಂಗಳ ವೇತನ ಹಿಂಬಾಕಿ ಮತ್ತು 01.01.2024 ರಿಂದ ಜಾರಿಗೊಳಿಸಬೇಕಾಗಿರುವ ವೇತನ ಪರಿಷ್ಕರಣೆ ಸಂಬಂಧ ಡಿ. 13ರಂದು ಪ್ರತ್ಯೇಕವಾಗಿ ಸಭೆ ನಿಗದಿಪಡಿಸದೆ ಸಮಸ್ತ ಸಾರಿಗೆ ನೌಕರರ ಹಿತದೃಷ್ಟಿಯಿಂದ ಅದನ್ನು ಮಾರ್ಪಡಿಸಿ ಸರ್ವ ಸಂಘಟನೆಗಳೊಂದಿಗೆ ಒಂದೇ ವೇದಿಕೆಯಡಿ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿದ್ದಾರೆ.
Related









