NEWSನಮ್ಮರಾಜ್ಯಶಿಕ್ಷಣ

ನಮ್ಮ‌ ಸರ್ಕಾರ ವರ್ಷಕ್ಕೆ 65 ಸಾವಿರ ಕೋಟಿ ರೂ. ಶಿಕ್ಷಣಕ್ಕೆ ಖರ್ಚು ಮಾಡುತ್ತಿದೆ: ಸಿಎಂ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಶಿಕ್ಷಣ ನಮ್ಮ‌ ಸರ್ಕಾರದ ಆದ್ಯತಾ ಕಾರ್ಯಕ್ರಮವಾಗಿದ್ದು, ವರ್ಷಕ್ಕೆ 65 ಸಾವಿರ ಕೋಟಿ ರೂಪಾಯಿಯನ್ನು ಶಿಕ್ಷಣಕ್ಕೆ ಖರ್ಚು ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿ ಮಾತನಾಡಿದರು.

ನಾನು ರಾಜಪ್ಪ ಮೇಸ್ಟ್ರಿಂದ ಅಕ್ಷರವನ್ನು ಹಾಗೂ ಪ್ರೊ.ನಂಜುಂಡಸ್ವಾಮಿ ಅವರಿಂದ ರಾಜಕೀಯ ಪಾಠ ಕಲಿತೆ. ನಮ್ಮ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ರೂಪಿಸುವುದು ವೈಚಾರಿಕ ಶಿಕ್ಷಣ. ಕೇವಲ ಪಾತ್ರೆ ತುಂಬಿಸುವುದು ಶಿಕ್ಷಣ ಅಲ್ಲ. ಮಕ್ಕಳಲ್ಲಿ ಅರಿವಿನ ಕಿಡಿ ಹೊತ್ತಿಸುವುದೇ ಶಿಕ್ಷಣದ ಉದ್ದೇಶ ಮತ್ತು ಮಹತ್ವವಾಗಿದೆ. ಇಂಥಾ ಶಿಕ್ಷಣ ನಮ್ಮ ಸರ್ಕಾರದ ಗುರಿಯಾಗಿದೆ.

ಮೊದಲೆಲ್ಲಾ ಶೂದ್ರರಿಗೆ ವಿದ್ಯೆ ಕಲಿಯುವ ಅವಕಾಶ ಇರಲಿಲ್ಲ. ಸಂವಿಧಾನ ಎಲ್ಲರಿಗೂ ಕಡ್ಡಾಯ ಶಿಕ್ಷಣದ ಹಕ್ಕು ನೀಡಿದೆ. ಆದ್ದರಿಂದ, ನಮ್ಮ ಸರ್ಕಾರ ಬಂದ ಮೇಲೆ ಸಂವಿಧಾನದ ಪೀಠಿಕೆಯನ್ನು ಅರ್ಥೈಸುವ ಕೆಲಸ ಮಾಡುತ್ತಿದೆ. ಸ್ವಾತಂತ್ರ್ಯ, ಸಮಾನತೆ, ಬ್ರಾತೃತ್ವ ಸಂವಿಧಾನದ ಮೌಲ್ಯಗಳಾಗಿದ್ದು ಇವನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಮನುಷ್ಯತ್ವ ಹೊಂದಿರುವ ಅತ್ಯುನ್ನತ ನಾಗರಿಕರನ್ನು ಸೃಷ್ಟಿಸಬಹುದು. ಇದನ್ನು ಶಿಕ್ಷಕರು ಅರ್ಥ ಮಾಡಿಕೊಂಡು ನಾಗರಿಕ ಸಮಾಜ ರೂಪಿಸಬೇಕು.

ಜಾತಿ ವ್ಯವಸ್ಥೆ ಇರುವ ನಮ್ಮ ಸಮಾಜದಲ್ಲಿ ಬದಲಾವಣೆ ಆಗಿ ಮಾನವೀಯ ವ್ಯವಸ್ಥೆ ರೂಪುಗೊಳ್ಳಬೇಕು. ಶಿಕ್ಷಣ ಕಲಿತೂ ಜಾತಿ ಆಚರಿಸುವುದು, ಕಂದಾಚಾರ-ಮೌಢ್ಯ ಆಚರಿಸುವುದು ಶಿಕ್ಷಣಕ್ಕೆ ಬಗೆಯುವ ದ್ರೋಹ. ಆದ್ದರಿಂದ ವೈಚಾರಿಕತೆ, ವೈಜ್ಞಾನಿಕತೆ, ಪರಧರ್ಮ ಸಹಿಷ್ಣುತೆ ಮೈಗೂಡಿಸಿಕೊಳ್ಳುವ ಶಿಕ್ಷಣ ಕೊಡುವ ನೈತಿಕ ಮತ್ತು ವೃತ್ತಿಪರ ಹೊಣೆಗಾರಿಕೆ ಶಿಕ್ಷಕರ ಮೇಲಿದೆ.

ವೈದ್ಯರಾದವರು, ಪ್ರೊಫೆಸರ್‌ಗಳು, ಉಪನ್ಯಾಸಕರೂ ಹಣೆ ಬರಹ ನಂಬಿಕೊಂಡಿದ್ದಾರೆ. ಇವರು ಸೇರಿದಂತೆ  ಇಂಜಿನಿಯರಿಂಗ್ ಓದಿದವರೂ ಜಾತಿ ಮಾಡುವುದನ್ನು, ಮೌಢ್ಯ ಆಚರಿಸುವುದನ್ನು ನಾನು ನೋಡಿದ್ದೇನೆ. ಹಾಗಾದರೆ ಇವರಿಗೆ ಸಿಕ್ಕ ಶಿಕ್ಷಣ ಎಂಥದ್ದು ಎನ್ನುವುದನ್ನು ಯೋಚಿಸಬೇಕು ಎಂದು ಹೇಳಿದರು.

Advertisement
ವಿಜಯಪಥ - vijayapatha.in
Megha
the authorMegha

Leave a Reply

error: Content is protected !!