ಮೈಸೂರು: ಕಾವೇರಿ ನೀರನ್ನು ರಾಜ್ಯದ ರೈತರಿಗೆ ಕೊಡದೆ ತಮಿಳುನಾಡಿಗೆ ಬಿಟ್ಟು ರೈತರನ್ನು ಬಲಿಕೊಟ್ಟ ರಾಜ್ಯ ಸರ್ಕಾರದ ವಿರುದ್ಧ ಮೈಸೂರಿನ ಅರಮನೆ ಗೇಟ್ ಮುಂಭಾಗದ ಆಂಜನೇಯ ದೇವಸ್ಥಾನದಿಂದ ಪಂಜಿನ ಮೆರವಣಿಗೆಯನ್ನು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ್ ನೇತೃತ್ವದಲ್ಲಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕುರುಬೂರ ಶಾಂತಕುಮಾರ್, ಕಬಿನಿ ಕಾವೇರಿ ನೀರು ತಮಿಳುನಾಡಿಗೆ ಹರಿಸಿ ರಾಜ್ಯದ ರೈತರನ್ನ ಬಲಿಕೊಟ್ಟಿರುವ ರಾಜ್ಯ ಸರ್ಕಾರದ ವರ್ತನೆ ಖಂಡಿಸಿ ಮಹದಾಯಿ ನೀರಿನ ವಿವಾದ, ಮೇಕೆದಾಟು ಅಣೆಕಟ್ಟೆ ನಿರ್ಮಾಣ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕಾವೇರಿ ಮತ್ತು ಮಹದಾಯಿ ನದಿ ನೀರಿನ ವಿವಾದ ಕುರಿತು ಯಾವುದೇ ಮಾತನಾಡದೆ ಮೂಕರಂತೆ ಇರುವ ಲೋಕಸಭಾ ಸದಸ್ಯರ ಕಚೇರಿ ಮುಂದೆ ಇದೇ ಸೆ.4ರಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಕರ್ನಾಟಕ ಜಲ ಸಂರಕ್ಷಣಾ ಸಮಿತಿ ಪ್ರತಿಭಟನೆ ನಡೆಸಿ ಹಕ್ಕೊತಯ ಪತ್ರ ಸಲ್ಲಿಸಲು ತೀರ್ಮಾನಿಸಿದೆ ಎಂದು ತಿಳಿಸಿದರು.
ಕಬ್ಬು ಬೆಳೆಗಾರರಿಗೆ ಬರಬೇಕಾದ ಹಿಂದಿನ ವರ್ಷದ ಬಾಕಿ ಹೆಚ್ಚುವರಿ 150 ರೂ. ಸಕ್ಕರೆ ಕಾರ್ಖಾನೆಗಳಿಂದ ಕೂಡಲೇ ಕೊಡಿಸಬೇಕು. ಪ್ರಸಕ್ತ ಸಾಲಿನ 2023- 24ನೇ ಸಾಲಿನ ಕಬ್ಬಿನ ದರ ಏರಿಕೆ ಮಾಡಬೇಕು. ಕೃಷಿ ಪಂಪ್ಸೆಟ್ಟುಗಳಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮಾಡುತ್ತಿರುವುದನ್ನು ವಿರೋಧಿಸಿ, ಆಧಾರ್ ಕಾರ್ಡ್ ಲಿಂಕ್ ಮಾಡುತ್ತಿರುವುದನ್ನು ಕೈಬಿಡುವಂತೆ ಆಗ್ರಹಿಸಿದರು.
ರೈತ ಬಿತ್ತಿದ ಬೀಜ ಸತ್ತಿದೆ, ಅಂತರ್ಜಲ ಕುಸಿದಿದೆ ರಾಜ್ಯದಲ್ಲಿ ಬರಫಿಡಿತ ಪ್ರದೇಶಗಳ ಜನ ಜಾನುವಾರುಗಳ ರಕ್ಷಣಾತ್ಮಕ ಕ್ರಮ ಮಾಡದೆ ನಿರ್ಲಕ್ಷ್ಯ ತೋರಿಸುತ್ತಿರುವ ರಾಜ್ಯ ಸರ್ಕಾರ, ಬಜೆಟ್ ನಲ್ಲಿ ಕೃಷಿಗೆ ಅನುದಾನ ಕಡಿತ ಮಾಡಿರುವುದನ್ನು ವಿರೋಧಿಸಲಾಗುವುದು ಎಂದು ಹೇಳಿದರು.
ಕೇಂದ್ರ ಸರ್ಕಾರ ಅಕ್ಕಿ, ಸಕ್ಕರೆ, ಈರುಳ್ಳಿ, ರಪ್ತು ನಿಷೇಧ ಮಾಡಿರುವುದನ್ನ ಖಂಡಿಸಲಾಗುವುದು. ಬಗರಹುಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ವಿತರಿಸಬೇಕು ಎಲ್ಲವುಗಳನ್ನು ಒಳಗೊಂಡಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆಯಲು ಲೋಕಸಭಾ ಸದಸ್ಯರನ್ನು ಒತ್ತಾಯಿಸಲು ರಾಜ್ಯಾದ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ವೇಳೆ ರಾಜ್ಯ ಕಾರ್ಯಧ್ಯಕ್ಷ ವೀರನಗೌಡ ಪಾಟೀಲ್, ಸುರೇಶ್ ಮ. ಪಾಟೀಲ್, ರಮೇಶ್ ಹೂಗಾರ್, ಜಿ.ವಿ. ಲಕ್ಷ್ಮೀದೇವಿ, ಎಂ.ಬಿ.ಚೇತನ್, ಸೋಮಶೇಖರ, ಅತ್ತಹಳ್ಳಿ ದೇವರಾಜ್, ಬರಡನಪುರ ನಾಗರಾಜ್ ಸೇರಿದಂತೆ ನೂರಾರು ರೈತರು ಭಗವಹಿಸಿದ್ದರು.