ಬನ್ನೂರು: ರಾಜ್ಯ ಸರ್ಕಾರ ತಮಿಳುನಾಡಿಗೆ ಪದೇಪದೆ ನೀರು ಹರಿಸಿ ರೈತರ ಮರಣ ಶಾಸನ ಬರೆದಿದ್ದಾರೆ. ಅಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಯಾಗಿರುವುದನ್ನು ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರಿಗೆ ಘೇರಾವ್ ಮಾಡುವ ಮೂಲಕ ಚಳವಳಿ ನಡೆಸಬೇಕಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಎಚ್ಚರಿಸಿದ್ದಾರೆ.
ಇಂದು ಬನ್ನೂರು ಸಂತೆಮಾಳದ ಮೈಸೂರು – ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿ ಅವರು, ರಾಜ್ಯ ಸರ್ಕಾರ ಈ ಬರಗಾಲ ಪರಿಸ್ಥಿತಿಯಲ್ಲೂ ರೈತರ ಬದುಕು ನಾಶಮಾಡಿ ತಮಿಳುನಾಡನ್ನು ರಕ್ಷಣೆ ಮಾಡುತ್ತಿದೆ. ಮುಂದಿನ ಚುನಾವಣೆಯಲ್ಲಿ ಗೆಲ್ಲಲು ರೈತರ ಮರಣ ಶಾಸನ ಬರೆದಿದ್ದಾರೆ. ನೀರು ನಿರ್ವಹಣಾ ಮಂಡಳಿ, ಕಾವೇರಿ ನೀರು ಪ್ರಾಧಿಕಾರ ರದ್ದುಮಾಡಬೇಕು. ಚುನಾವಣೆ ಆಯೋಗದ ರೀತಿ ಸ್ವತಂತ್ರ ಸಂಸ್ಥೆ ರಚನೆ ಮಾಡಿ ರಾಜ್ಯದ ರೈತರನ್ನು ರಕ್ಷಣೆ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣವೇ ನಿಲ್ಲಿಸದಿದ್ದರೆ ಜಿಲ್ಲೆಯಲ್ಲಿ ವಿಭಿನ್ನ ರೀತಿಯ ಉಗ್ರ ಪ್ರತಿಭಟನೆ ನಡೆಸಲಾಗುವುದು ಹಾಗೂ ದಸರಾ ಆಚರಣೆಗೆ ಅಡ್ಡಿಪಡಿಸ ಬೇಕಾಗುತ್ತದೆ ಎಂದು ಕಿಡಿ ಕಾರಿದರು.
ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ, ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಇಂಡಿಯಾ ಒಕ್ಕೂಟ ಬೇಕೋ ಅಥವಾ ರಾಜ್ಯದ ಜನ ಬೇಕೋ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನರು ತಮ್ಮ ತೀರ್ಮಾನ ಏನೆಂದು ತೋರಿಸುತ್ತೇವೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ಸಂಘಟನಾ ಕಾರ್ಯದರ್ಶಿ ಕುರುಬೂರು ಪ್ರದೀಪ್, ಬನ್ನೂರು ಸೂರಿ, ಶ್ರೀನಿವಾಸ್, ಕುಂತನಹಳ್ಳಿ ಸ್ವಾಮಿ, ಆತ್ತಹಳ್ಳಿ ಸಿ.ಲಿಂಗಣ್ಣ, ಅರುಣ್ ಕುಮಾರ್, ರಾಮ ಮುಂತಾದವರು ಇದ್ದರು.