ಸಾರಿಗೆ ಮುಷ್ಕರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ PIL ಸಲ್ಲಿಕೆ: ಸರ್ಕಾರಕ್ಕೆ ಒಂದುದಿನದ ಕಾಲಾವಕಾಶ ಕೊಟ್ಟ ಕೋರ್ಟ್- ದಿನದ ಮಟ್ಟಿಗೆ ಮುಷ್ಕರ ಮುಂದೂಡಲು ನಿರ್ದೇಶನ


ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳಯಿಂದ (ಆ.5) ಹಮ್ಮಿಕೊಂಡಿರುವ ಮುಷ್ಕರ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಪಿಐಎಲ್ ಸಂಬಂಧ ಸರ್ಕಾರಕ್ಕೆ ಒಂದು ದಿನದ ಕಾಲಾವಕಾಶವನ್ನು ಕೋರ್ಟ್ ನೀಡಿದ್ದು, ಮುಷ್ಕರವನ್ನು ಒಂದು ದಿನ ಮುಂದೂಡುವಂತೆ ನಿರ್ದೇಶಿಸಿದೆ.
ಬೆಂಗಳೂರಿನ ನಿವಾಸಿ ಜೆ.ಸುನೀಲ್ ಮತ್ತಿತರರು ಪಿಐಎಲ್ ಸಲ್ಲಿಕೆ ಮಾಡಿದ್ದು, ಮುಷ್ಕರ ನಡೆಸುವುದರಿಂದ ರಾಜ್ಯಾದ್ಯಂತ ಜನಜೀವನ ಅಸ್ತವ್ಯಸ್ತಗೊಳ್ಳಲಿದೆ. ಇದರಿಂದ ನಾಗರಿಕರ ಮೂಲಭೂತ ಹಕ್ಕಿಗೆ ಧಕ್ಕೆಯಾಗುತ್ತದೆ ಹೀಗಾಗಿ ಇದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಅಲ್ಲದೆ ನೌಕರರ ಬೇಡಿಕೆಯನ್ನು ಸರ್ಕಾರ ಕೂಡಲೇ ಈಡೇರಿಸುವ ಮೂಲಕ ನಾಗರಿಕರಿಗೆ ಆಗುವ ತೊಂದರೆಯನ್ನು ತಪ್ಪಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದು, ಈ ಸಂಬಂಧ ಮಧ್ಯಾಹ್ನ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು.
ಈ ವೇಳೆ ಸರ್ಕಾರ ಎರಡು ದಿನಗಳ ಕಾಲವಕಾಶಕೋರಿತ್ತು. ಅದಕ್ಕೆ ಒದಪ್ಪ ಕೋರ್ಟ್ ನಾಳೆ ಒಂದುದಿನ ಮಾತ್ರ ಕಾಲಾವಕಾಶ ನೀಡಿದ್ದು, ಅಲ್ಲಿಯುವರೆಗೂ ಸಾರಿಗೆ ಸಂಘಟನೆಗಳು ಮುಷ್ಕರವನ್ನು ಮುಂದೂಡುವಂತೆ ನಿರ್ದೇಶ ನೀಡಿದೆ.
ಹೀಗಾಗಿ ನಾಳೆ ಬೆಳಗ್ಗೆ 6 ಗಂಟೆಯಿಂದಲೇ ಅನಿವರ್ದಿಷ್ಟಾವಧಿ ಮುಷ್ಕರಕ್ಕೆ ಸಜ್ಜಾಗಿದ್ದ ಕೆಎಸ್‌ಆರ್ಟಿಸಿ, ಬಿಎಂಟಿಸಿ ಸೇರಿದಂತೆ 4 ನಿಗಮಗಳ ನೌಕರರು ನಾಳೆವರೆಗೆ ಕೋರ್ಟ್ ನಿರ್ದೇಶನ ಪಾಲಿಸುವುದಾಗಿ ತಿಳಿಸಿದ್ದಾರೆ.
ನಾಳೆ ಸರ್ಕಾರ ನೌಕರರಿಗೆ ನ್ಯಾಯಯುತವಾಗಿ ಕೊಡಬೇಕಿರುವುದನ್ನು ಕೊಡಲು ಒಪ್ಪದಿದ್ದರೆ 23 ಸಾವಿರ ಬಸ್‌ಗಳು ರಸ್ತೆಗಿಳಿಯುವುದಿಲ್ಲ ಎನ್ನಲಾಗಿದೆ. ಈ ನಡುವೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ನಡೆಸಲು ಮುಂದಾಗಿರುವ ಸಾರಿಗೆ ನೌಕರರ ಮನವೊಲಿಕೆಗೆ ಇಂದು ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಹೈ ವೋಲ್ಟೇಜ್ ಸಭೆ ಕೂಡ ವಿಫಲಗೊಂಡಿದೆ.

ಅರ್ಜಿ ವಿಚಾರಣೆ: ಸಾರಿಗೆ ನೌಕರರ ಬೇಡಿಕೆ ಈಡೇರಿಸಿ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರವಹಿಸಲು ಸರ್ಕಾರಕ್ಕೆ ಸೂಚನೆ ನೀಡುವಂತೆ ವಕೀಲ ಅಮೃತೇಶ್ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಇಂದು ಮುಖ್ಯ ನ್ಯಾಯಮೂರ್ತಿಗಳ ಕೋರ್ಟ್ ಕಲಾಪ ಇಲ್ಲದ ಕಾರಣ ನ್ಯಾ.ಕೆ.ಎಸ್.ಮುದಗಲ್, ನ್ಯಾ.ಎಂ.ಜಿ.ಎಸ್. ಕಮಲ್ ಅವರ ಪೀಠದಲ್ಲಿ ಈ ಅರ್ಜಿಯ ವಿಚಾರಣೆ ನಡೆಯಿತು.
ಅರ್ಜಿದಾರರ ಪರ ಹಾಜರಾಗಿದ್ದ ದೀಕ್ಷಾ ಅಮೃತೇಶ್ ಅವರು, ಜುಲೈ 15ರಂದು ಪ್ರತಿಭಟನಾಕಾರರು ನೋಟಿಸ್ ನೀಡಿದ್ದಾರೆ. ಆದರೆ ಈಗ ಪ್ರತಿಭಟನೆ ನಡೆಸದಂತೆ ಎಸ್ಮಾ ಜಾರಿಗೊಳಿಸಿದ್ದಾರೆ ಎಂದು ಕೋರ್ಟ್ ಗಮನಕ್ಕೆ ತಂದರು.
ಈ ವೇಳೆ ಸರ್ಕಾರದ ಪರ ಹಾಜರಾದ ವಕೀಲೆ ನಿಲೋಫರ್ ಅಕ್ಬರ್, ಸಿಎಂ ಸಿದ್ದರಾಮಯ್ಯನವರು ಸಾರಿಗೆ ನೌಕರರ ಜೊತೆ ಸಭೆ ನಡೆಸುತ್ತಿದ್ದು ಪ್ರಗತಿಯಲ್ಲಿದೆ ಎಂಬ ವಿಚಾರವನ್ನು ಕೋರ್ಟ್ ಗಮನಕ್ಕೆ ತಂದರು.
ವಾದ ಅಲಿಸುವ ವೇಳೆ, ಇದು ಅರ್ಜಿದಾರರ ಪ್ರಾಮಾಣಿಕತೆಗೆ ಸಂಬಂಧಿಸಿದ ವಿಚಾರವಾಗಿದ್ದು ಅವರ ಕಳಕಳಿಯನ್ನ ನೀವು ನೋಡಬೇಕು. ಸರ್ಕಾರ ಇನ್ನೊಬ್ಬರ ಹೆಗಲ ಮೇಲೆ ಇಟ್ಟು ಶೂಟ್ ಮಾಡಬಾರದು ಎಂದು ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತು.
ಕೊನೆಗೆ ಇಂದು ಮುಖ್ಯಮಂತ್ರಿಗಳು ಸಭೆ ನಡೆಸುತ್ತಿದ್ದಾರೆ. ಒಂದು ದಿನ ಸಾರಿಗೆ ಮುಷ್ಕರ ಮುಂದೂಡಬಹುದು ಎಂದು ಹೇಳಿ ಬುಧವಾರಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿತು.
Related
