ಬೆಳಗಾವಿ: ಸುವರ್ಣಸೌಧದ ಮುಂದೆ ಉಪವಾಸ ಸತ್ಯಾಗ್ರಹ ಕುಳಿತಿರುವ ಸಾರಿಗೆ ನೌಕರರನ್ನು ಮತ್ತೆ ಎಬ್ಬಿಸಲು ಪೊಲೀಸರು ಮುಂದಾಗುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಸತ್ಯಾಗ್ರಹ ಸ್ಥಳದ ಟೆಂಟ್ ಒಳಗಿರುವ ಸುಮಾರು 40 ಮಂದಿ ನೌಕರರನ್ನು ಹೊರ ಹೋಗಲು ಹೇಳುತ್ತಿದ್ದು, ಹೊರಗಿನಿಂದ ಬರುತ್ತಿರುವ ನೌಕರರನ್ನು ಟೆಂಟ್ ಒಳಹೋಗದಂತೆ ದೌರ್ಜನ್ಯ ಎಸಗುತ್ತಿದ್ದಾರೆ ಪೊಲೀಸರು.
ಟೆಂಟ್ ಸುತ್ತಲು ಸರ್ಪಗಾವಲಿನಂತೆ ಪೊಲೀಸರನ್ನು ನಿಯೋಜನೆ ಮಾಡಿರುವ ಸರ್ಕಾರ ಸಾರಿಗೆ ನೌಕರರನ್ನು ಒಂದು ರೀತಿ ಭಯೋತ್ಪಾದಕರಂತೆ ನೋಡುತ್ತಿದೆ. ಅಲ್ಲದೆ ಅವರನ್ನು ಸತ್ಯಾಗ್ರಹ ಸ್ಥಳದಿಂದ ಎಬ್ಬಿಸಲು ಲಾಠಿಪ್ರಹಾರ ಮಾಡುವುದಕ್ಕೂ ಮುಂದಾಗುತ್ತಿದೆ ಎಂದು ಹೇಳಲಾಗುತ್ತಿದೆ.
ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಡಿ ಎಂದು ಶಾಂತಿಯುತವಾಗಿ ಕಳೆದ 6 ದಿನದಿಂದ ಅನ್ನ ಆಹಾರ ಸೇವಿಸದೆ ಉಪವಾಸ ಸತ್ಯಾಗ್ರಹ ಕುಳಿತಿರುವ ನೌಕರರ ಮನವಿಗೆ ಸ್ಪಂದಿಸದ ಈ ಸರ್ಕಾರ ಅವರನ್ನು ಭಯೋತ್ಪಾದಕರಂತೆ ನೋಡುತ್ತಿದ್ದು, ಪೊಲೀಸರನ್ನು ಬಿಟ್ಟು ದೌರ್ಜನ್ಯ ಎಸಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಇನ್ನು ಪೊಲೀಸರು ಕೂಡ ಸತ್ಯಾಗ್ರಹ ನಿರತ ನೌಕರರನ್ನು ಎಬ್ಬಿಸಲು ಈಗಾಗಲೇ ಏರುಧ್ವನಿಯಲ್ಲಿ ದರ್ಪದಿಂದ ನಡೆದುಕೊಳ್ಳುತ್ತಿದ್ದಾರೆ. ಇದೇನು ಪ್ರಜಾಪ್ರಭುತ್ವ ವ್ಯವಸ್ಥೆಯೋ ಇಲ್ಲ ಹಿಟ್ಲರ್ ಸಂಸ್ಕೃತಿಯೋ ಎಂದು ಕಿಡಿಕಾರುತ್ತಿದ್ದಾರೆ ಜನರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳಿಗಾಗಿ ಶಾಂತಿಯುತ ಹೋರಾಟ ಮಾಡಲು ಪ್ರತಿಯೊಬ್ಬರಿಗೂ ಅವಕಾಶವಿದೆ ಆದರೆ ಆ ಸ್ವತಂತ್ರವನ್ನೇ ಸರ್ಕಾರ ಪೊಲೀಸರ ಮೂಲಕ ಕಿತ್ತುಕೊಳ್ಳುತ್ತಿದೆ ಎಂದರೆ ಇಂಥ ಸರ್ಕಾರ ಜನ ಸಾಮಾನ್ಯರಿಗೆ ಧ್ವನಿಯಾಗುವುದೇ ಎಂಬ ಅನುಮಾನವು ಕಾಡುತ್ತಿದೆ.
ಇನ್ನು ಸಮಸ್ಯೆ ಆದಾಗ ನಿವಾರಿಸಬೇಕಾದ ಸರ್ಕಾರವೇ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದರೆ ಈ ನಾಡಿನ 7 ಕೋಟಿ ಜನರನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸುರಕ್ಷಿತವಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೆ ತಲುಪಿಸುವ ಸಾರಿಗೆ ನೌಕರರು ಯಾರ ಬಳಿ ಹೋಗಬೇಕು ಮತ್ತು ಕೇಳಬೇಕು.
ಇಂಥ ಮಾನ ಮರ್ಯಾದೆ ಇಲ್ಲದ ಸರ್ಕಾರ ರಾತ್ರಿಯೇ ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ನೌಕರರನ್ನು ಎಬ್ಬಿಸಲು ಪೊಲೀಸರನ್ನು ಛೂ ಬಿಟ್ಟಿತ್ತು. ಅದರ ಮುಂದುವರಿದ ಭಾಗವಾಗಿ ಈಗ ಮತ್ತೇ ಛೂ ಬಿಟ್ಟು ನೌಕರರ ಮೇಲೆ ದೌರ್ಜನ್ಯ ಎಸಗುತ್ತಿದೆ.