NEWSನಮ್ಮಜಿಲ್ಲೆನಮ್ಮರಾಜ್ಯ

ಕಳಪೆ ಬೇರಿಂಗ್, ಶಾಕ್‌ ಅಬ್ಸಾರ್ವರ್‌ ಬಳಕೆ- ಸ್ಟೀಲ್‌ ಸೇತುವೆ ಬಿಜೆಪಿ ಸರ್ಕಾರದ 40% ದಂಧೆಯ ಅಕ್ರಮ ಶಿಶು: ಮೋಹನ್‌ ದಾಸರಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜಧಾನಿಯ ಶಿವಾನಂದ ವೃತ್ತದಲ್ಲಿ 39 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸ್ಟೀಲ್‌ ಬ್ರಿಡ್ಜ್‌ ಬಿಜೆಪಿ ಸರ್ಕಾರದ 40% ಕಮಿಷನ್‌ ದಂಧೆಯ ಅಕ್ರಮ ಶಿಶು ಎಂದು ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ ಹೇಳಿದ್ದಾರೆ.

ಇಂದು ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೋಹನ್‌ ದಾಸರಿ, “ಶಿವಾನಂದ ವೃತ್ತದ ಸ್ಟೀಲ್‌ ಸೇತುವೆಯನ್ನು ಕಳಪೆ ಗುಣಮಟ್ಟದ ಬೇರಿಂಗ್, ಶಾಕ್‌ ಅಬ್ಸಾರ್ವರ್‌ ಬಳಸಿ ನಿರ್ಮಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಗಸ್ಟ್‌ 15ರಿಂದ ಒಂದು ಬದಿಯ ಸಂಚಾರ ಆರಂಭವಾಗಿದ್ದು, ಅಲ್ಲಿ ಸಂಚರಿಸಿದರೆ ಕಳಪೆ ಕಾಮಗಾರಿ ಸ್ಪಷ್ಟವಾಗುತ್ತಿದೆ. ಸೇತುವೆಯಲ್ಲಿ ಸುಮಾರು 20 ಮೀಟರ್‌ಗೊಮ್ಮೆ ಜಾಯಿಂಟ್‌ಗಳಿದ್ದು, ಅಲ್ಲಿ ವಾಹನಸವಾರರಿಗೆ ಕಿರಿಕಿರಿಯಾಗುವಂತಹ ಅವೈಜ್ಞಾನಿಕ ಹಂಪುಗಳನ್ನು ನಿರ್ಮಿಸಲಾಗಿದೆ. ಲಘು ವಾಹನ ಸಂಚರಿಸಿದರೂ ಸೇತುವೆಯು ವೈಬ್ರೇಟ್‌ ಆಗುತ್ತಿದೆ ಎಂದು ಆರೋಪಿಸಿದರು.

ಆಗಸ್ಟ್‌ 30ರಂದು ಶಿವಾನಂದ ವೃತ್ತದ ಸ್ಟೀಲ್‌ ಸೇತುವೆಯು ಪೂರ್ಣಪ್ರಮಾಣದಲ್ಲಿ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ. ಆಮ್‌ ಆದ್ಮಿ ಪಾರ್ಟಿಯು ಅದರ ಹಿಂದಿನ ದಿನವಾದ ಆಗಸ್ಟ್‌ 29ರಂದು ಉದ್ಘಾಟನೆಯ ಅಣಕು ಪ್ರದರ್ಶನ ನಡೆಸಿ ಕಳಪೆ ಕಾಮಗಾರಿಯನ್ನು ಬಯಲು ಮಾಡಲಿದೆ. ಈ ಮೂಲಕ ಭ್ರಷ್ಟ ಬಿಜೆಪಿ ಸರ್ಕಾರದ ಅವ್ಯವಹಾರದ ಕುರಿತು ಜನಜಾಗೃತಿ ಮೂಡಿಸುತ್ತೇವೆ ಎಂದು ದಾಸರಿ ತಿಳಿಸಿದರು.

2017ರಲ್ಲಿ ಆರಂಭವಾದ ಕಾಮಗಾರಿಯು ಪೂರ್ಣಗೊಳ್ಳಲು ಇಷ್ಟು ವರ್ಷಗಳ ಸಮಯ ತೆಗೆದುಕೊಂಡಿರುವುದು ದುರಂತ. ಆರಂಭದಲ್ಲಿ ಕೇವಲ 19 ಕೋಟಿ ರೂಪಾಯಿಯಾಗಿದ್ದ ಕಾಮಗಾರಿ ಮೊತ್ತವು ಈಗ ಬರೋಬ್ಬರಿ 39 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಕಿಡಿಕಾರಿದರು.

ಇನ್ನು ಈ ಹಿಂದೆ ಸಿದ್ದರಾಮಯ್ಯ ಸರ್ಕಾರವು 2000 ಕೋಟಿ ರೂ. ವೆಚ್ಚದಲ್ಲಿ ಚಾಲುಕ್ಯ ವೃತ್ತದಿಂದ ಹೆಬ್ಬಾಳದ ತನಕ ಸ್ಟೀಲ್‌ ಸೇತುವೆ ನಿರ್ಮಾಣ ನೆಪದಲ್ಲಿ ಲೂಟಿಗೆ ಮುಂದಾದಾಗ ಎಎಪಿ ಹಾಗೂ ಹಲವು ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಆಗ ಸಿದ್ದರಾಮಯ್ಯನವರ ವಿರುದ್ಧ 500 ಕೋಟಿ ರೂಪಾಯಿ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಇದರಿಂದ ಪ್ರೇರಣೆಗೊಂಡ ಬಿಜೆಪಿ ಸರ್ಕಾರವು ಅಕ್ರಮ ನಡೆಸಲೆಂದೇ ಸ್ಟೀಲ್‌ ಸೇತುವೆಯನ್ನು ಪೂರ್ಣಗೊಳಿಸಿದೆ ಎಂದು ಮೋಹನ್‌ ದಾಸರಿ ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಶೇ. 40ರಷ್ಟಿದ್ದ ಕಮಿಷನ್‌ ಈಗ ಶೇ. 50ಕ್ಕೆ ಏರಿಕೆಯಾಗಿದೆ ಎಂದು ಬಿಬಿಎಂಪಿಯ ಆಯುಕ್ತರಿಗೆ ಬಿಬಿಎಂಪಿ ಕಾರ್ಯನಿರತ ಪತ್ರಕರ್ತರ ಸಂಘವು ದೂರು ಸಲ್ಲಿಸಿರುವುದು ಆಘಾತಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

ಇತ್ತ ಕಮಿಷನ್‌ ನೀಡಲು ಒಪ್ಪದ ಕಾರಣಕ್ಕಾಗಿ ಹಲವು ಗುತ್ತಿಗೆದಾರರಿಗೆ 22 ತಿಂಗಳುಗಳಿಂದ ಬಿಬಿಎಂಪಿ ಬಿಲ್‌ ಪಾವತಿಯಾಗಿಲ್ಲ. ಕಮಿಷನ್‌ ದಂಧೆಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ಬಿಜೆಪಿಯು ತಲೆಕೆಡಿಸಿಕೊಳ್ಳದೇ, ಕಮಿಷನ್‌ ಹೆಚ್ಚಿಸುವುದರಲ್ಲಿ ನಿರತವಾಗಿದೆ ಎಂದು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಉಪಸ್ಥಿತರಿದ್ದರು.

Leave a Reply

error: Content is protected !!
LATEST
KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ... KSRTC ಬಸ್‌ನಲ್ಲಿ ₹70 ಸಾವಿರ ಮೌಲ್ಯದ ತಂಬಾಕು ಸಾಗಿಸಿದ ಚನ್ನಪಟ್ಟಣ ಘಟಕದ ಕಂಡಕ್ಟರ್‌ ತಮಿಳುನಾಡಿನಲ್ಲಿ ಬಂಧನ KKRTC ಕೊಪ್ಪಳ ಘಟಕಕ್ಕೆ  RTO ಅಧಿಕಾರಿಗಳ ತಂಡ ಭೇಟಿ: ನೌಕರರಿಗೆ ವಾಯುಮಾಲಿನ್ಯ ದುಷ್ಪರಿಣಾಮಗಳ ಬಗ್ಗೆ ಅರಿವು ಗಂಭೀರ ಸ್ವರೂಪ ಪಡೆಯುತ್ತಿದೆ ದೆಹಲಿ ರೈತರ ಹೋರಾಟ: ನ.26ರಿಂದ ಉಪವಾಸ ಸತ್ಯಾಗ್ರಹ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಾಗರದಂತೆ ಬನ್ನಿ: ಮೀರಾ ಶಿವಲಿಂಗಯ್ಯ ಕರೆ SC, ST ಅಲೆಮಾರಿ ಸಮುದಾಯಗಳ ಯೋಜನೆಗಳು ಸದ್ಬಳಕೆ ಆಗಬೇಕು: ಡಿಸಿ ಶಿವಶಂಕರ