ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಏಪ್ರಿಲ್ ಮೊದಲ ವಾರದಲ್ಲಿ ದಿನಾಂಕ ಪ್ರಕಟ ಆಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಇಂದೇ (ಮಾರ್ಚ್ 29, 2023 ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟ ಆಗಲಿದೆ. ಈ ಬಗ್ಗೆ ಚುನಾವಣಾ ಆಯೋಗ ಇಂದು ಸುದ್ದಿಗೋಷ್ಠಿ ನಡೆಸಲಿದ್ದು, ಚುನಾವಣೆಯ ದಿನಾಂಕ ಘೋಷಣೆ ಮಾಡಲಿದೆ.
ಚುನಾವಣಾ ಆಯೋಗ ಇಂದು ಬೆಳಗ್ಗೆ 11. 30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದು, ರಾಜ್ಯ ವಿಧಾನಸಭೆ ಚುನಾವಣೆಯ ದಿನಾಂಕ ಪ್ರಕಟ ಮಾಡಲಿದೆ. ಇಂದು ವಿಧಾನಸಭೆ ಚುನಾವಣೆಯ ಡೇಟ್ ಫಿಕ್ಸ್ ಆಗಲಿದೆ ಎಂದರೆ ನೀತಿ ಸಂಹಿತೆ ಸಹ ಇಂದಿನಿಂದಲೇ ಆರಂಭವಾಗಲಿದೆ. ಹೀಗಾಗಿ ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣಾ ಆಯೋಗ ಇಂದೇ ದಿನಾಂಕ ಘೋಷಣೆ ಮಾಡಲಿದೆ.
ಕೇಂದ್ರ ಚುನಾವಣಾ ಆಯೋಗ ರಾಷ್ಟ್ರ ರಾಜಧಾನಿ ದೆಹಲಿಯ ವಿಗ್ಯಾನ್ ಭವನದಲ್ಲಿ ಬೆಳಗ್ಗೆ 11.30 ಕ್ಕೆ ಮಹತ್ವದ ಸುದ್ದಿಗೋಷ್ಠಿ ನಡೆಸಲಿದೆ. ರಾಜ್ಯ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ನಡೆಯುತ್ತದೋ ಅಥವಾ ಎರಡು ಹಂತದಲ್ಲಿ ನಡೆಯುತ್ತದೋ ಎಂಬುದು ಸಹ ಇಂದೇ ನಿರ್ಧಾರವಾಗಲಿದೆ.
ರಾಜ್ಯದಲ್ಲಿನ ಚುನಾವಣಾ ಸಿದ್ಧತೆ ಕುರಿತು ಕೇಂದ್ರ ಚುನಾವಣಾ ಆಯೋಗ ಈಗಾಗಲೇ ಪೂರ್ವಭಾವಿ ಪರಿಶೀಲನೆ ನಡೆಸಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತವರ ತಂಡ ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದ್ದು, ಚುನಾವಣಾ ಸಿದ್ಧತೆಗಳ ಕುರಿತು ಪರಿಶೀಲನೆ ನಡೆಸಿದೆ. ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸಲು ಅಗತ್ಯ ಇರುವ ಎಲ್ಲ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಏಪ್ರಿಲ್ ಮೊದಲ ವಾರ ಅಂದರೆ, ಏಪ್ರಿಲ್ 3 ಅಥವಾ 4ರಂದು ಚುನಾವಣಾ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದ್ದವು. ಈ ಮಧ್ಯೆ, ಏಪ್ರಿಲ್ 4ರಂದು ಮಹಾವೀರ ಜಯಂತಿ ಇದ್ದು, ಅಂದು ಸಾರ್ವತ್ರಿಕ ರಜಾ ದಿನವಾಗಿದೆ ಎಂದು ಹೇಳಲಾಗಿತ್ತು. ಆದರೆ, ಇಂದೇ ಚುನಾವಣಾ ಆಯೋಗ ಸುದ್ದಿಗೋಷ್ಠಿ ನಡೆಸಲಿದ್ದು, ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟಿಸಲಿದೆ.