ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ರಾಜ್ಯ ಭೇಟಿ ವೇಳೆ ಸರ್ವಪಕ್ಷ ಸಭೆ ಕರೆಯಲು ಆಗ್ರಹಿಸಿ ಪ್ರಧಾನಿಗೆ ಪೃಥ್ವಿ ರೆಡ್ಡಿ ಪತ್ರ
ಬೆಂಗಳೂರು: ಕರ್ನಾಟಕ ಪ್ರವಾಸವನ್ನು ಕೇವಲ ಚುನಾವಣಾ ಪ್ರಚಾರಕ್ಕೆ ಸೀಮಿತಗೊಳಿಸದೇ, ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿಯವರು ಸರ್ವಪಕ್ಷಗಳ ಸಭೆ ಆಯೋಜಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಬೆಂಗಳೂರು ಹಾಗೂ ಸುತ್ತಮುತ್ತ ಸುಮಾರು 40 ಜನರ ಸಾವಿಗೆ ಕಾರಣವಾದ ರಸ್ತೆಗುಂಡಿ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ನಿಮ್ಮ ಗಮನವನ್ನು ಸೆಳೆಯಲು ನಾಗರಿಕರು ಪ್ರಯತ್ನಿಸಿದ್ದರು. ಡಬಲ್ ಎಂಜಿನ್ ಸರ್ಕಾರವನ್ನು ಅಧಿಕಾರಕ್ಕೆ ತರಲು ನೀವು ಪ್ರಚಾರ ಮಾಡಿದ್ದಿರಿ ಎಂಬುದನ್ನು ನೀವು ನೆನಪಿಸಿಕೊಳ್ಳಬೇಕು.
ಬೆಂಗಳೂರಿನ ನಾಗರಿಕರು ಬಿಬಿಎಂಪಿಯಲ್ಲೂ ಅಧಿಕಾರ ನೀಡುವ ಮೂಲಕ ನಿಮಗೆ ಮೂರನೇ ಎಂಜಿನ್‌ನನ್ನು ಕೂಡ ನೀಡಿದ್ದಾರೆ. ಆದರೆ ನೀವು ಇಲ್ಲಿನ ನಾಗರಿಕರನ್ನು ಕೆಟ್ಟದಾಗಿ ನೋಡಿಕೊಳ್ಳುತ್ತಿದ್ದೀರಿ ಎಂದು ತಿಳಿಸಲು ವಿಷಾದಿಸುತ್ತೇವೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಕನ್ನಡಕ್ಕೆ ತೋರುತ್ತಿರುವ ಮಲತಾಯಿ ಧೋರಣೆ ಬಗ್ಗೆಯೂ ನಾವು ಅಸಮಾಧಾನ ಹೊಂದಿದ್ದೇವೆ. ಕನ್ನಡಕ್ಕೆ 2017-18ರಲ್ಲಿ 1 ಕೋಟಿ ರೂಪಾಯಿ, 2018-19ರಲ್ಲಿ 99 ಲಕ್ಷ ಹಾಗೂ 2019-20ರಲ್ಲಿ 1.07 ಕೋಟಿ ರೂಪಾಯಿ ನೀಡಿದ್ದೀರಿ. ತಮಿಳಿಗೆ ಸಿಕ್ಕಿರುವ ಅನುದಾನಕ್ಕೆ ಹೋಲಿಕೆ ಮಾಡಿದರೆ ಇದು ಅತ್ಯಲ್ಪ ಮೊತ್ತವಾಗಿದೆ. ತಮಿಳಿಗೆ 2017-18ರಲ್ಲಿ 10.59 ಕೋಟಿ ರೂಪಾಯಿ, 2018-19ರಲ್ಲಿ 4.65 ಕೋಟಿ ರೂಪಾಯಿ ಹಾಗೂ 2019-20ರಲ್ಲಿ 7.7 ಕೋಟಿ ರೂಪಾಯಿ ಸಿಕ್ಕಿದೆ ಎಂದು ಪೃಥ್ವಿ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾವೇರಿ ವಿವಾದ ಬಗ್ಗೆ ಅಭಿಪ್ರಾಯ ತಿಳಿಸಿರುವ ಪೃಥ್ವಿ ರೆಡ್ಡಿ, “ಕಾವೇರಿ ನದಿ ವಿವಾದ ನ್ಯಾಯಮಂಡಳಿ (ಸಿಡಬ್ಲ್ಯೂಡಿಟಿ) ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕರ್ನಾಟಕವು ತಮಿಳುನಾಡಿಗೆ 174.25 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕಾಗಿದೆ. ತಮಿಳುನಾಡಿನ ಮೂಲಕ 400 ಟಿಎಂಸಿ ನೀರು ಸಮುದ್ರಕ್ಕೆ ಹೋಗುತ್ತಿದ್ದು, ಇದನ್ನು ಹಿಡಿದಿಟ್ಟುಕೊಳ್ಳಲು ಅಥವಾ ಬಳಸಿಕೊಳ್ಳಲು ತಮಿಳುನಾಡಿನ ಬಳಿ ವ್ಯವಸ್ಥೆ ಇಲ್ಲ.
ದೊಡ್ಡ ಪ್ರಮಾಣದ ನೀರು ಸಮುದ್ರದ ಪಾಲಾಗುತ್ತಿದ್ದರೂ, 67 ಟಿಎಂಸಿ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸುವ ಮೇಕೆದಾಟು ಯೋಜನೆಗೆ ಆಕ್ಷೇಪ ವ್ಯಕ್ತಪಡಿಸುವ ನಿರ್ಣಯಕ್ಕೆ ತಮಿಳುನಾಡು ಸರ್ಕಾರವು ಅಲ್ಲಿನ ವಿಧಾನಸಭೆಯಲ್ಲಿ ಅನುಮೋದನೆ ಪಡೆದಿದೆ. ತಾವು ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕರ್ನಾಟಕದ ಜನತೆ ಬಯಸುತ್ತಿದ್ದಾರೆ. ಆದರೆ ನೀವು ಕರ್ನಾಟಕದ ಸರ್ವ ಪಕ್ಷಗಳ ನಿಯೋಗದ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ನಿರಾಕರಿಸಿದ್ದೀರಿ. ಹಿಂದಿನ ಎಲ್ಲ ಪ್ರಧಾನಿಗಳು ಆಗಾಗ ಸರ್ವ ಪಕ್ಷಗಳ ನಿಯೋಗದೊಂದಿಗೆ ಚರ್ಚಿಸುತ್ತಿದ್ದರು” ಎಂದು ಹೇಳಿದ್ದಾರೆ.
“ಮಹದಾಯಿಗೆ ಸಂಬಂಧಿಸಿದಂತೆ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿಯವರು ದಿನಾಂಕವಿಲ್ಲದ ಅನುಮತಿ ಪತ್ರವೊಂದನ್ನು (ಸಂಖ್ಯೆ T-28027/2/2022-PA(S)DTE) ಡಿಸೆಂಬರ್ 29, 2022ರಂದು ಟ್ವೀಟ್ ಮಾಡಿದ್ದಾರೆ. ಅದು ಮಹದಾಯಿ ಕುಡಿಯುವ ನೀರಿನ ಯೋಜನೆಗೆ ಸಂಬಂಧಿಸಿದ ಕೇಂದ್ರ ಜಲ ನಿಗಮದ (ಸಿಡಬ್ಲ್ಯುಸಿ) ಅನುಮತಿ ಪತ್ರದಂತೆ ಕಂಡುಬರುತ್ತಿದೆ. ಇದೊಂದು ಸ್ವಾಗತಾರ್ಹ ಬೆಳವಣಿಗೆ ಎನ್ನುವುದರಲ್ಲಿ ಅನುಮಾನವಿಲ್ಲ.
ಆದರೆ ಏಪ್ರಿಲ್ 30, 2002ರಂದು ಗೋವಾ ವ್ಯಕ್ತಪಡಿಸಿದ್ದ ಆತಂಕವನ್ನು ಪರಿಗಣಿಸಿದ ನಂತರವೂ ಕೇಂದ್ರ ಸರ್ಕಾರವು ಈ ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿತ್ತು ಎನ್ನುವುದನ್ನು ಮರೆಯಬಾರದು. ಆಗ ಕೂಡ ಅಧಿಕಾರದಲ್ಲಿದ್ದ ಇದೇ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಕೇವಲ ಐದು ತಿಂಗಳ ನಂತರ, ಅಂದರೆ ಸೆಪ್ಟೆಂಬರ್ 19, 2002ರಂದು ತಾತ್ವಿಕ ಒಪ್ಪಿಗೆಯನ್ನು ಅಮಾನತಿನಲ್ಲಿ ಇಟ್ಟಿತು” ಎಂದು ಪೃಥ್ವಿ ರೆಡ್ಡಿ ಪತ್ರದಲ್ಲಿ ಹೇಳಿದ್ದಾರೆ.
“ಇನ್ನು ಕೃಷ್ಣ ನದಿ ನೀರು ವಿವಾದ ನ್ಯಾಯಮಂಡಳಿಯು ಕರ್ನಾಟಕಕ್ಕೆ 900 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಪ್ರಸ್ತುತ ಕರ್ನಾಟಕವು 600 ಟಿಎಂಸಿಗಿಂತ ತುಸು ಹೆಚ್ಚು ನೀರನ್ನು ಬಳಸಿಕೊಳ್ಳುತ್ತಿದೆ. ಈಗ ಕೇಂದ್ರ ಸರ್ಕಾರ ಮಾಡಬೇಕಿರುವುದು ಏನೆಂದರೆ, ಸುಪ್ರೀಂ ಕೋರ್ಟ್ ಆದೇಶವನ್ನು ಐಎಸ್‌ಡಬ್ಲ್ಯೂಆರ್‌ಡಿ ಕಾಯಿದೆ ಸೆಕ್ಷನ್ 6ರ ಅಡಿಯಲ್ಲಿ ಗೆಜೆಟ್ ಹೊರಡಿಸಬೇಕು. ಎಂಟು ವರ್ಷಗಳಿಂದ ಅಧಿಕಾರದಲ್ಲಿರುವ ಸರ್ಕಾರವು ಈ ಸರಳ ಕೆಲಸವನ್ನೂ ಮಾಡಿಲ್ಲ” ಎಂದು ಪೃಥ್ವಿ ರೆಡ್ಡಿ ಪತ್ರದಲ್ಲಿ ಹೇಳಿದ್ದಾರೆ.
“ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ, ಸಂವಿಧಾನದ 2ರಿಂದ 4ರ ತನಕದ ಆರ್ಟಿಕಲ್‌ಗಳು ರಾಜ್ಯಗಳಿಗೆ ಪುನರ್ವಿಂಗಡಣೆ ಕಾನೂನು ರೂಪಿಸುವ ಹಕ್ಕನ್ನು ಸಂಸತ್ತಿಗೆ ನೀಡಿದೆ. ಇದು ರಾಜ್ಯವೊಂದರ ಅಸ್ತಿತ್ವವನ್ನು ಅಂತ್ಯಗೊಳಿಸುವ ಹಕ್ಕನ್ನು ಕೂಡ ಒಳಗೊಂಡಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಬಾಕಿ ಉಳಿಸಿಕೊಂಡಿರುವ ರಾಜ್ಯಗಳ ನಡುವೆ ಶಾಂತಿ, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಮಧ್ಯಪ್ರವೇಶಿಸುವ ಹಾಗೂ ನಿರ್ದೇಶನ ನೀಡುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ.
ಆದರೆ ಕೇಂದ್ರ ಸರ್ಕಾರವು ರಾಜ್ಯಗಳು ಪರಸ್ಪರ ದ್ವೇಷ ಕಾರಲು ಹಾಗೂ ಪ್ರಮುಖ ರಾಜಕೀಯ ನಾಯಕರುಗಳೇ ಇದನ್ನು ಭಾರತ-ಚೀನಾದಂತಹ ಜಟಿಲ ವಿವಾದದಂತೆ ಬಿಂಬಿಸಲು ಅನುವು ಮಾಡಿಕೊಟ್ಟಿರುವುದನ್ನು ನಾವು ಗಮನಿಸುತ್ತಿದ್ದೇವೆ” ಎಂದು ಪತ್ರದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ.
“ನೀವು ಕರ್ನಾಟಕದಲ್ಲಿ ಇರುವಾಗ ಈ ಎಲ್ಲ ವಿಷಯಗಳನ್ನು ಚರ್ಚಿಸಲು ನಿಮ್ಮ ನೇತೃತ್ವದಲ್ಲಿ, ಆಮ್ ಆದ್ಮಿ ಪಾರ್ಟಿ ಒಳಗೊಂಡ ಸರ್ವಪಕ್ಷ ಸಭೆಯನ್ನು ನಾವು ನಿರೀಕ್ಷಿಸಬಹುದೇ? ಒಂದುವೇಳೆ ನೀವು ಕರ್ನಾಟಕದಲ್ಲಿ ಇದ್ದಾಗಲೂ ನಿಮಗೆ ಈ ವಿಷಯಗಳನ್ನು ಉದ್ದೇಶಿಸಲು ಸಮಯ ಸಿಗದಿದ್ದರೆ, ನಾವು ನಿಮಗೊಂದು ಸಲಹೆ ನೀಡಲು ಬಯಸುತ್ತೇವೆ.
ಅದೇನೆಂದರೆ, ಪ್ರಧಾನಿ ಕಚೇರಿಯನ್ನು ಎರಡು ಭಾಗವಾಗಿ ವಿಂಗಡಿಸುವುದು. ಒಂದು, ಕೆಲಸ ಮಾಡುವ ಪ್ರಧಾನಿಗಾಗಿ ಹಾಗೂ ಇನ್ನೊಂದು, ಚುನಾವಣಾ ಪ್ರಧಾನಿಗಾಗಿ. ಕೆಲಸ ಮಾಡುವ ಪ್ರಧಾನಿಯನ್ನು ದೀರ್ಘಾವಧಿಯಿಂದ ಬಾಕಿ ಉಳಿದಿರುವ ರಾಜ್ಯಗಳ ಸಮಸ್ಯೆಗಳನ್ನು ಬಗೆಹರಿಸಲು ನಿಯೋಜಿಸಬೇಕು. ಚುನಾವಣಾ ಪ್ರಧಾನಿಯನ್ನು ಚುನಾವಣೆಗಳು ಇರುವ ಪ್ರದೇಶಗಳಲ್ಲಿ ಸ್ವಪಕ್ಷದ ಪರ ಪ್ರಚಾರಕ್ಕೆ ನಿಯೋಜಿಸಬೇಕು” ಎಂದು ಪತ್ರದಲ್ಲಿ ಪೃಥ್ವಿ ರೆಡ್ಡಿ ಹೇಳಿದ್ದಾರೆ.