ಬೆಂಗಳೂರು: ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಶೋಷಣೆಗೆ ಒಳಗಾದ ಮಹಿಳೆಯರ ಸುರಕ್ಷತೆ ಬಗ್ಗೆ ಆತಂಕ ಇದೆ, ಸರ್ಕಾರ ಈ ಬಗ್ಗೆ ಮಾಹಿತಿ ಕೊಡಬೇಕು ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ್ ದಾಸರಿ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಇಡೀ ದೇಶ ಕಂಡರಿಯದ ದೊಡ್ಡ ಲೈಂಗಿಕ ಹಗರಣವಾಗಿದೆ. ಪೆನ್‌ಡ್ರೈವ್‌ನಲ್ಲಿ 300ಕ್ಕಿಂತ ಹೆಚ್ಚಿನ ಮಹಿಳೆಯರ ವಿಡಿಯೋ ಇದೆ ಎಂದು ಹೇಳಲಾಗಿದೆ. ಈ ಮಹಿಳೆಯರ ಪರಿಸ್ಥಿತಿ ಏನಾಗಿದೆ? ಈ ಎಲ್ಲ ಮಹಿಳೆಯರು ಸುರಕ್ಷಿತವಾಗಿದ್ದಾರಾ? ಅವರಿಗೆ ಬೆದರಿಕೆ ಇದೆಯಾ ಎನ್ನುವುದು ಗೊತ್ತಿಲ್ಲ, ಎಸ್‌ಐಟಿ ಒಂದು ಕಡೆ ತನಿಖೆ ಮಾಡುತ್ತಿದ್ದು, ಗೃಹ ಸಚಿವರು ಎಲ್ಲ ಮಹಿಳೆಯರ ಸುರಕ್ಷತೆ ಬಗ್ಗೆ ಮಾಹಿತಿ ಕೊಡಬೇಕು ಎಂದು ಒತ್ತಾಯಿಸಿದರು.
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯದ ಪೆನ್‌ಡ್ರೈವ್ ಬಹಿರಂಗವಾಗುತ್ತಿದ್ದಂತೆ, ಶೋಷಿತ ಮಹಿಳೆಯರು ಭಯಭೀತರಾಗಿದ್ದಾರೆ. ಅವರು ಆಚೆ ಬಂದು ಧೈರ್ಯವಾಗಿ ಮಾತನಾಡಲು ಆಗದಂತಾಗಿದೆ. ರಾಜ್ಯದ ಮಹಿಳಾ ಆಯೋಗ ಹಾಸದಲ್ಲೇ ಇದ್ದು, ಶೋಷಣೆಗೆ ಒಳಗಾದ ಮಹಿಳೆಯರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು, ಆಗ ಮಾತ್ರ ಅವರು ಧೈರ್ಯವಾಗಿ ಬಂದು ತಮ್ಮ ಮೇಲೆ ಆಗಿರುವ ದೌರ್ಜನ್ಯದ ಬಗ್ಗೆ ಮಾತನಾಡುತ್ತಾರೆ ಎಂದರು.
ಉಗ್ರಂ ಸಿನಿಮಾದಲ್ಲಿ ಓರ್ವ ಪ್ರಭಾವಿ ರಾಜಕಾರಣಿಯ ಮಗ ಕಂಡ ಕಂಡ ಮಹಿಳೆಯರನ್ನು ಅತ್ಯಾಚಾರ ಮಾಡುತ್ತಾನೆ, ದೌರ್ಜನ್ಯ ಎಸಗುತ್ತಾನೆ. ಆ ತರಹದ ಘಟನೆ ಹಾಸನದಲ್ಲಿ ಕೂಡ ಆಗಿರುವ ಸಾಧ್ಯತೆ ಇದೆ. ಪ್ರಜ್ವಲ್ ರೇವಣ್ಣ ಕೂಡ ತನಗಿಷ್ಟ ಬಂದ ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಯಾವುದೇ ಸಂಶಯ ಇಲ್ಲ.
ಇನ್ನು ಇದು ಒಂದೆರಡು ವರ್ಷದಲ್ಲಿ ಆಗಿರುವುದಲ್ಲ, ಕಳೆದ 10 ವರ್ಷಗಳಿಂದ ಇದೇ ರೀತಿ ಮಹಿಳೆಯರ ಮೇಲೆ ಶೋಷಣೆ ಮಾಡಲಾಗಿದೆ. ಗೃಹ ಸಚಿವ ಜಿ. ಪರಮೇಶ್ವರ್ ಅವರು ತಕ್ಷಣ ಮಹಿಳೆಯರ ಸುರಕ್ಷತೆ ಖಚಿತಪಡಿಸಿಕೊಂಡು, ಮಾಹಿತಿ ನೀಡಬೇಕು, ಆಗ ಮಾತ್ರ ಜನಕ್ಕೆ ಮಹಿಳೆಯರ ಸುರಕ್ಷತೆ ಬಗ್ಗೆ ನಂಬಿಕೆ ಬರಲಿದೆ ಎಂದು ಮೋಹನ್ ದಾಸರಿ ತಿಳಿಸಿದರು.