ಬೆಂಗಳೂರು: ಇಪಿಎಸ್ ಪಿಂಚಿಣಿದಾರರ ಪ್ರತಿಭಟನಾ ಸಭೆ ಇದೇ ನವೆಂಬರ್ 28ರಂದು ಬಿಎಂಟಿಸಿ & ಕೆಎಸ್ಆರ್‌ಟಿಸಿ ನಿವೃತ್ತ ನೌಕರರ ಸಂಘಟನೆಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನೆಯ ಕಾರ್ಯಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಅಂದು ಬೆಳಗ್ಗೆ 11 ಗಂಟೆಗೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯನಿಧಿ ಕಚೇರಿ ಆವಣದಲ್ಲಿ ಜರುಗುವ ಪ್ರತಿಭಟನೆ ಹಾಗೂ ಈ ಬಾರಿ ತೀಕ್ಷಣವಾದ ಮನವಿ ಪತ್ರವನ್ನು ಅಧಿಕಾರಿಗಳಿಗೆ ಸಲ್ಲಿಸುವ ಸಭೆಗೆ ರಾಜ್ಯದ ಮೂಲೆ ಮೂಲೆಗಳಿಂದ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಿಧಿ ಅಪ್ಕೆ ನಿಕಟ್(Nidhi Aapke Nikit) ಕಾರ್ಯಕ್ರಮವನ್ನು ಇಪಿಎಫ್ಒ ಅಧಿಕಾರಿಗಳು ತಮ್ಮ ಕಚೇರಿ ಆವರಣದಲ್ಲಿ ಇದೇ ನ.28 ರಂದು ಹಮ್ಮಿಕೊಂಡಿದ್ದು, ಇಪಿಎಸ್ ನಿವೃತ್ತರ ಕುಂದು ಕೊರತೆಗಳನ್ನು ಈಡೇರಿಸುತ್ತೇವೆ ಎಂದು ತಿಳಿಸಿದ್ದಾರೆ. ಆದರೆ, ಈಗಾಗಲೇ ನಮ್ಮ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಹಲವಾರು ಬಾರಿ ಇಪಿಎಫ್ಒ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಹಲವಾರು ಮನವಿ ಪತ್ರಗಳನ್ನು ಕೊಟ್ಟರು ಈವರೆಗೂ ಈಡೇರಿಸಿಲ್ಲ.
ಅಲ್ಲದೆ ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವರಿಗೆ (minister for labour & employment) ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರ ಮೂಲಕ ಮನವಿ ಸಲ್ಲಿಸಿದ್ದರೂ ಕೂಡ ನಮ್ಮ ಮನವಿಗೆ ಸಂಬಂಧಿಸಿದಂತೆ ಕೇಂದ್ರದಿಂದಲೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸುತ್ತಿರುವುದು ಕಂಡುಬರುತ್ತಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ಈ ಪ್ರತಿಭಟನಾ ಸಭೆಗೆ ರಾಷ್ಟ್ರೀಯ ಸಂಘರ್ಷ ಸಮಿತಿ ಸಂಯೋಜಕ ರಮಾತಾಂತ ನರಗುಂದ ಭಾಗವಹಿಸಲಿದ್ದು, ಡಿಸೆಂಬರ್ 7ರಿಂದ ಮುಂದುವರಿದಂತೆ, ದೆಹಲಿಯ ರಾಮಲೀಲಾ ಮೈದಾನ ಹಾಗೂ ಜಂತರ್ ಮಂತರ್‌ನಲ್ಲಿ ನಿವೃತ್ತರ ಕನಿಷ್ಠ ಪಿಂಚಣಿಗೆ ಆಗ್ರಹಿಸಿ, ಬೃಹತ್ ಪ್ರತಿಭಟನೆ ಹಾಗೂ ಉಪವಾಸ ಸತ್ಯಾಗ್ರಹ ನಡೆಯುವ ಬಗ್ಗೆ ಹಲವು ಮಾಹಿತಿ ಹಂಚಿಕೊಳ್ಳಲಿದ್ದಾರೆ.
ದೇಶಾದ್ಯಂತ ಅಂದು ಸಾವಿರಾರು ನಿವೃತ್ತರು ಪ್ರತಿಭಟನಾ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಇನ್ನು ಡಿಸೆಂಬರ್ 4ರಿಂದ 22ರವರೆಗೆ ಚಳಿಗಾಲದ ಪಾರ್ಲಿಮೆಂಟ್ ಅಧಿವೇಶನ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಇಪಿಎಸ್ ನಿವೃತ್ತರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತಿದ್ದು, ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಇದ್ದು ಸುಸಮಯವೇಂದು ತಿಳಿಸಿದ್ದಾರೆ.
ಇನ್ನು ಕೇಂದ್ರ ಸರ್ಕಾರಕ್ಕೆ ಇದೊಂದು ಎಚ್ಚರಿಕೆ ಗಂಟೆಯಾಗಲಿದೆ. ಈಗಾಗಲೇ ಕಮಾಂಡರ್ ಅಶೋಕ್ ರಾವುತ್ ರವರು ನಮ್ಮ ಪಿಂಚಣಿ ಬೇಡಿಕೆಗಳನ್ನು ಈಡೇರಿಸುವಂತೆ ಎಚ್ಚರಿಕೆಯ ಮನವಿ ಪತ್ರ ನೀಡಿದ್ದು, ಈ ಎಲ್ಲ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸದೆ ಹೋದಲ್ಲಿ, ದೆಹಲಿಯಲ್ಲಿ ನಡೆಯುವ ಉಪವಾಸ ಸತ್ಯಾಗ್ರಹ ಯಾವ ರೂಪ ತಾಳುತ್ತದೆ ಎಂಬುದನ್ನು ಕಾಲವೇ ನಿರ್ಧರಿಸಲಿದೆ ಎಂದು ತಿಳಿಸಿದ್ದಾರೆ.