ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ : ವೃದ್ಧನ ಬಂಧನ
ಮೂಡುಬಿದಿರೆ: ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಈ ಸಂಬಂಧ ವೃದ್ಧನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಆಕೆಯ ಸಾವಿಗೆ ಲೈಂಗಿಕ ಕಿರುಕುಳವೇ ಕಾರಣ ಎಂಬ ಆರೋಪ ಕೇಳಿ ಬರುತ್ತಿದ್ದು ಈ ಸಂಬಂಧ ಆರೋಪಿ ವೃದ್ಧ ಶ್ರೀಧರ ಪುರಾಣಿಕನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಬೈಲೂರಿನ ಹುಡುಗಿ ಮೂಡುಬಿದಿರೆಯ ಹೊರವಲಯದ ಹೌದಾಲ್‌ನ ತನ್ನ ಚಿಕ್ಕಮ್ಮನ ಮನೆಯಲ್ಲಿ ಇದ್ದುಕೊಂಡು ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದಳು.
ಆದರೆ ಇದ್ದಕ್ಕಿಂದ್ದಂತೆ ಬುಧವಾರ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆತ್ಮಹತ್ಯೆಗೂ ಮುನ್ನ ಆಕೆ ಬರೆದಿಟ್ಟ ಡೆತ್ ನೋಟ್‌ನಲ್ಲಿ ಕಾಲೇಜಿನ ನಿವೃತ್ತ ಸಿಬ್ಬಂದಿ ಶ್ರೀಧರ ಪುರಾಣಿಕನ ಹೆಸರನ್ನು ಉಲ್ಲೇಖೀಸಿ, ಆತನ ಲೈಂಗಿಕ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿವರಿಸಿದ್ದಳು.
ಈ ಹಿನ್ನೆಲೆಯಲ್ಲಿ ಆರೋಪಿ ಶ್ರೀಧರ ಪುರಾಣಿಕನನ್ನು ಮೂಡುಬಿದಿರೆ ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಘಟನೆಯ ವಿವರ 17ರಹರೆಯದ ಪೂಜಾ ( ಹೆಸರು ಬದಲಾಯಿಸಲಾಗಿದೆ) ಮಂಗಳವಾರ ಕಾಲೇಜಿಗೆ ಹಾಜರಾಗಿದ್ದು, ವಿಪರೀತ ಕಿವಿನೋವು ಇದೆ ಎಂದು ಕಾಲೇಜಿನ ಉಪನ್ಯಾಸಕರಿಗೆ ತಿಳಿಸಿದ್ದಾಳೆ. ಬಳಿಕ ಕಾಲೇಜಿನಿಂದ ಆಕೆಯ ಪೋಷಕರೊಬ್ಬರಿಗೆ ಕರೆಮಾಡಿ ಆಕೆಯನ್ನು ಕರೆದುಕೊಂಡು ಹೋಗಲು ಸೂಚಿಸಿದ್ದರು.
ಕರೆ ಸ್ವೀಕರಿಸಿದ ಆಕೆಯ ಪೋಷಕರು ಕೆಲಸದ ಒತ್ತಡದಲ್ಲಿದ್ದರಿಂದ ಆರೋಪಿ ಪುರಾಣಿಕನಿಗೆ ಆಕೆಯನ್ನು ಕಾಲೇಜಿನಿಂದ ಕರೆತರುವಂತೆ ಹೇಳಿದ್ದಾರೆ. ಸಂತ್ರಸ್ಥೆಯ ಪೋಷಕರು ಆರೋಪಿ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.
ಈ ಕಾರಣಕ್ಕೆ ಪರಿಚಯಸ್ಥ ಪುರಾಣಿಕ ಆಕೆಯನ್ನು ತನ್ನ ಕಾರಿನಲ್ಲಿ ಮನೆಯತ್ತ ಕರೆದುಕೊಂಡು ಬರುವಾಗ ಮಾರ್ಗ ಮಧ್ಯೆ ಕಾರು ನಿಲ್ಲಿಸಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇದರಿಂದ ಮನನೊಂದ ಆಕೆ ಬುಧವಾರ ತನ್ನ ಮನೆಯ ಸಮೀಪದ ಹಾಡಿಯ ಮರವೊಂದಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪೂಜಾ ಅಪ್ರಾಪ್ತೆಯಾಗಿರುವ ಹಿನ್ನೆಲೆಯಲ್ಲಿ ಪೋಕ್ಸೋ ಕಾಯಿದೆ, ದಲಿತ ದೌರ್ಜನ್ಯ ತಡೆ ಕಾಯ್ದೆ ಆಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.