ರಾಯಚೂರು: ಇಲ್ಲಿನ ಸಾರಿಗೆ ಬಸ್ ನಿಲ್ದಾಣದ ಒಳಗೇ ಖಾಸಗಿ ವಾಹನಗಳ ದರ್ಬಾರ್ ಜೋರಾಗಿದ್ದು, ಪ್ರಯಾಣಿಕರನ್ನು ಬಸ್‌ನಿಲ್ದಾಣದೊಳಕ್ಕೇ ಬಂದು ರಾಜಾರೋಷವಾಗಿ ಹತ್ತಿಸಿಕೊಂಡು ಹೋಗುತ್ತಿದ್ದಾರೆ ಎಂದು ವಿಜಯಪಥ ಆನ್‌ಲೈನ್ ಸುದ್ದಿಮಾಧ್ಯಮಲ್ಲಿ ವರದಿ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಖಾಸಗಿ ವಾಹನಗಳಿಗೆ ಕಡಿವಾಣ ಹಾಕಿದ್ದಾರೆ.
ಇತಿಹಾಸದಲ್ಲೇ ಈ ರೀತಿ ಸಾರಿಗೆ ಬಸ್ ನಿಲ್ದಾಣಕ್ಕೆ ಖಾಸಗಿ ವಾಹನಗಳು ಬರುತ್ತಿರುವುದು ಇದೇ ಮೊದಲು. ಹೀಗಿದ್ದರೂ ಅಧಿಕಾರಿಗಳು ಖಾಸಗಿ ವಾಹನಗಳನ್ನು ತಡೆಯುವಲ್ಲಿ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಳೆದ ಜನವರಿ 30ರಂದು KKRTC: ರಾಯಚೂರು ಬಸ್ ನಿಲ್ದಾಣದೊಳಗೆ ಖಾಸಗಿ ವಾಹನಗಳ ದರ್ಬಾರ್ – ಕಂಡು ಕಾಣದಂತೆ ವರ್ತಿಸುತ್ತಿರುವ ಅಧಿಕಾರಿಗಳು ಎಂಬ ಶೀರ್ಷಿಕೆಯಡಿ ವರದಿ ಮಾಡಲಾಗಿತ್ತು.
ಇದನ್ನೂ ಓದಿ : KKRTC: ರಾಯಚೂರು ಬಸ್ ನಿಲ್ದಾಣದೊಳಗೆ ಖಾಸಗಿ ವಾಹನಗಳ ದರ್ಬಾರ್ – ಕಂಡು ಕಾಣದಂತೆ ವರ್ತಿಸುತ್ತಿರುವ ಅಧಿಕಾರಿಗಳು
ಇದು ಅಧಿಕಾರಗಳ ನಿರ್ಲಕ್ಷ್ಯವಾಗಿದ್ದು, ಹೇಳುವವರು ಕೇಳುವವರು ಇಲ್ಲದಂತಾಗಿದೆ. ಅಧಿಕಾರಿಗಳ ಈ ನಡೆಯಿಂದ ಖಾಸಗಿಯವರಿಗೆ ಹಬ್ಬವಾಗಿದ್ದು ಸಾರಿಗೆ ಬಸ್‌ಗಳ ಆದಾಯಕ್ಕೆ ಕತ್ತರಿ ಬೀಳುತ್ತಿದೆ ಎಂದು ವಿವರಿಸಲಾಗಿತ್ತು.
ಈ ಎಲ್ಲವನ್ನು ಗಮನಿಸಿದ ರಾಯಚೂರು ವಿಭಾಗದ ಸಾರಿಗೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಖಾಸಗಿ ವಾಹನಗಳು ಬಸ್‌ನಿಲ್ದಾಣದೊಳಗೆ ಬಂದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ವಿಜಯಪಥದಲ್ಲಿ ವರದಿ ಮಾಡಿ ಗಮನ ಸೆಳೆದಿದ್ದಕ್ಕೆ ಅಭಿನಂದನೆ ತಿಳಿಸಿದ್ದಾರೆ.