NEWSನಮ್ಮಜಿಲ್ಲೆನಮ್ಮರಾಜ್ಯ

ಜಾತಿ ಹೆಸರಲ್ಲಿ ಸಮಾಜ ಛಿದ್ರಗೊಳಿಸುವ, ಸಂವಿಧಾನ ವಿರೋಧಿ BJP-RSS ತಿರಸ್ಕರಿಸಿ: ಸಿಎಂ ಸಿದ್ದರಾಮಯ್ಯ

ವಿಜಯಪಥ ಸಮಗ್ರ ಸುದ್ದಿ

ಚಿತ್ರದುರ್ಗ: ಜಾತಿ ಹೆಸರಲ್ಲಿ ಸಮಾಜವನ್ನು ಛಿದ್ರಗೊಳಿಸುವ, ಸಂವಿಧಾನ ವಿರೋಧಿ BJP-RSS ಅನ್ನು ತಿರಸ್ಕರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಚಿತ್ರದುರ್ಗದಲ್ಲಿ ಕರ್ನಾಟಕ ಶೋಷಿತ ಜಾತಿ-ಸಮುದಾಯಗಳ ಮಹಾ ಒಕ್ಕೂಟ ಮತ್ತು ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ್ದ “ಶೋಷಿತರ ಜಾಗೃತಿ ಸಮಾವೇಶ” ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದುಳಿದ, ದಲಿತ ಮತ್ತು ಶೋಷಿತ ಜಾತಿ ಸಮುದಾಯಗಳ ಜನ ತಮ್ಮ ಶತ್ರು ಯಾರು ಎನ್ನುವುದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳಬೇಕು. ಶತ್ರುಗಳನ್ನು ಸ್ಪಷ್ಟವಾಗಿ ಗುರುತಿ ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿ ನಿಮ್ಮ ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಮಂಡಲ್ ವರದಿಯನ್ನು ಬಿಜೆಪಿ – ಆರ್.ಎಸ್.ಎಸ್ ವಿರೋಧಿಸುತ್ತಲೇ ಬಂದಿದೆ. ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಬಿಜೆಪಿ – ಆರ್.ಎಸ್.ಎಸ್ ನಿರಂತರವಾಗಿ ವಿರೋಧಿಸುತ್ತಲೇ ಇದೆ. ಆದ್ದರಿಂದ ಸಂವಿಧಾನ ಮತ್ತು ಮೀಸಲಾತಿ ಹಾಗೂ ಸಾಮಾಜಿಕ ನ್ಯಾಯದ ವಿರೋಧಿಗಳ ಕೈಗೆ ಅಧಿಕಾರ ಹೋಗಬಾರದು ಎಂದು ಅಂಬೇಡ್ಕರ್ ಎಚ್ಚರಿಸಿದ್ದರು. ಈ ಎಚ್ಚರಿಕೆಯನ್ನು ನಾವು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.

ಬಾಬಾ ಸಾಹೇಬ್ ಅವರ ಸಂವಿಧಾನ ಇಲ್ಲದೇ ಹೋಗಿದ್ದರೆ ಕೆ.ಎಸ್.ಈಶ್ವರಪ್ಪ, ಸಿ.ಟಿ.ರವಿ ಮತ್ತು ಆರ್.ಅಶೋಕ್ ಶಾಸಕರಾಗಿ ವಿಧಾನಸಭೆ ಪ್ರವೇಶಿಸಲು ಸಾಧ್ಯವೇ ಇರಲಿಲ್ಲ. ಯಾರದ್ದೋ ಹೊಲ ಗದ್ದೆಗಳಲ್ಲಿ ಕೂಲಿ ಮಾಡುತ್ತಾ ಕೂರಬೇಕಾಗಿತ್ತು ಎಂದರು.

ಕುರಿ ಕಾಯುವವನ ಮಗ ಮುಖ್ಯಮಂತ್ರಿ ಆಗಿಬಿಟ್ಟೆ ಎನ್ನುವ ಕಾರಣಕ್ಕೆ ಪಟ್ಟ ಭದ್ರರು ನನ್ನನ್ನು ವಿರೋಧಿಸುತ್ತಾರೆ. ಎಲ್ಲ ಜಾತಿ, ಎಲ್ಲ ಧರ್ಮದ ಮಧ್ಯಮ ವರ್ಗ ಮತ್ತು ಬಡವರಿಗೆ ಅನುಕೂಲ ಆಗುವ ಯೋಜನೆಗಳನ್ನು ಜಾರಿಗೆ ತಂದಿದ್ದಕ್ಕೆ ನನ್ನನ್ನು ವಿರೋಧಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಅನ್ನಭಾಗ್ಯ, ಶೂ ಭಾಗ್ಯ, ಸಮವಸ್ತ್ರ ಭಾಗ್ಯ ಸೇರಿ ಸಾಲು ಸಾಲು ಅನುಕೂಲಗಳನ್ನು ಎಲ್ಲ ಜಾತಿ, ಎಲ್ಲ ಧರ್ಮದ ಬಡವರಿಗೆ ಕಲ್ಪಿಸಿದೆ. ಇದಕ್ಕೇ ನನ್ನನ್ನು ವಿರೋಧಿಸುತ್ತಾರೆ. ಆದರೆ ನಾನು ಎದೆ ಗುಂದದೆ ನಿಮ್ಮ ಪರವಾಗಿ ಇರುತ್ತೇನೆ. ಜಾತಿ ತಾರತಮ್ಯ, ಜಾತಿ ಶೋಷಣೆ, ಜಾತಿ ಆಧಾರಿತ ಅಸಮಾನತೆ ಇರುವವರೆಗೆ ಇಂಥಾ ಸಮಾವೇಶಗಳು ಅಗತ್ಯ ಮತ್ತು ಅನಿವಾರ್ಯ ಎಂದು ಹೇಳಿದರು.

ಸಂಘಟನೆಗಳ ಮೂಲಕ ಜಗೃತಿ ಪಡೆದುಕೊಂಡರೆ ಮಾತ್ರ ಜಾತಿ ವ್ಯವಸ್ಥೆ ನಾಶವಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಅಂಬೇಡ್ಕರ್ ಮುಂತಾದ ಮಹನೀಯರು ನೀಡಿದ್ದಾರೆ. ಕುಲ ಕುಲ ಎಂದು ಬಡಿದಾಡದಿರಿ ಎಂದು ಕರೆ ನೀಡಿದ ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಿ ಅವಮಾನಿಸಬೇಡಿ ಎಂದರು.

ಜಾತಿ ವ್ಯವಸ್ಥೆ ಕಾರಣಕ್ಕೆ ಶತ ಶತಮಾನಗಳಿಂದ ತಳ ಸಮುದಾಯಗಳ ಜನ ಶೋಷಣೆಗೆ ಒಳಗಾಗುತ್ತಲೇ ಇದ್ದಾರೆ. ಅಕ್ಷರ ಸಂಸ್ಕೃತಿಯಿಂದ ವಂಚಿತರಾದ ಪರಿಣಾಮ ಸಮಾಜದಲ್ಲಿ ಅಸಮಾನತೆ ಸೃಷ್ಟಿ ಆಯಿತು‌. ಸಾಮಾಜಿಕ, ಆರ್ಥಿಕ ಅಸಮಾನತೆಗೆ ಜಾತಿ ವ್ಯವಸ್ಥೆಯೇ ಕಾರಣ. ಈ ಜಾತಿ ತಾರತಮ್ಯದಿಂದಲೇ ದೇಶದಲ್ಲು ಶೋಷಣೆ ಮುಂದುವರೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಜಾತಿ ಶೋಷಣೆಗೆ ಕೊನೆ ಹಾಡುವ ಉದ್ದೇಶದಿಂದಲೇ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡಿದರು. ಸಾಹು ಮಹಾರಾಜ್, ಜ್ಯೋತಿ ಬಾಫುಲೆ, ಬುದ್ಧ, ಬಸವಣ್ಣ, ನಾರಾಯಣಗುರು, ನಾಲ್ವಡಿ ಅರಸರು, ವಿವೇಕಾನಂದ, ಕನಕದಾಸರೆಲ್ಲರೂ ಈ ಜಾತಿ ವ್ಯವಸ್ಥೆ ತೊಡೆದು ಹಾಕಲು ಶ್ರಮಿಸಿದರು. ನಮ್ಮ ಸಂವಿಧಾನ ಕೂಡ ಈ ಎಲ್ಲ ಮಹನೀಯರ ಆಶಯಗಳನ್ನು ಒಳಗೊಂಡಿದೆ ಎಂದರು.

ಇನ್ನು ಈ ಕಾರಣಕ್ಕೇ ಪಟ್ಟ ಭದ್ರ ಹಿತಾಸಕ್ತಿಗಳು, ದುಷ್ಟ ಶಕ್ತಿಗಳು ಸಂವಿಧಾನ ಬದಲಾಯಿಸುವ ಮೂಲಕ ಮತ್ತೆ ಶೋಷಣೆ, ಮೌಢ್ಯದ ದರ್ಬಾರ್ ಮುಂದುವರೆಸಲು ಯತ್ನಿಸುತ್ತಿವೆ. ಒಂದು ಕಡೆ ಸಂವಿಧಾನ ಬದಲಾಯಿಸಲು ಹುನ್ನಾರ ನಡೆಸುತ್ತಿದ್ದಾರೆ, ಮತ್ತೊಂದು ಕಡೆ ನಾಲ್ವಡಿ ಅರಸು ಮತ್ತು ಅಂಬೇಡ್ಕರ್, ಸಾಹು ಮಹಾರಾಜ್ ಪ್ರತಿಪಾದಿಸಿದ ಮೀಸಲಾತಿಯನ್ನೂ ವಿರೋಧಿಸುತ್ತಿದ್ದಾರೆ. ಆದ್ದರಿಂದ ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಕಾಂತರಾಜ್ ಅವರ ವರದಿಯನ್ನು ಕೆಲವರು ಓದದೆ, ತಿಳಿಯದೆ ವಿರೋಧಿಸುತ್ತಿದ್ದಾರೆ. ನಾವು ಕಾಂತರಾಜ ವರದಿಯನ್ನು ಖಂಡಿತಾ ಸ್ವೀಕರಿಸುತ್ತೇವೆ. ನಂತರ ಅದರಲ್ಲಿ‌ ಸಮಸ್ಯೆಗಳು ಕಂಡುಬಂದರೆ ತಜ್ಞರ ಅಭಿಪ್ರಾಯ ಪಡೆದು ಮುಂದುವರೆಯುತ್ತೇವೆ ಎಂದರು.

ಇನ್ನು ಕೇಂದ್ರದಲ್ಲಿ ನಮ್ಮ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇಡೀ ದೇಶದಲ್ಲಿ ಜಾತಿ ಗಣತಿ ಮಾಡಿಸುತ್ತೇವೆ ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ. ಕಾಂಗ್ರೆಸ್ ಪಕ್ಷ ಜಾತಿ ಗಣತಿಯ ಪರವಾಗಿದೆ. ಅಧಿಕಾರ ಇರಲಿ, ಇಲ್ಲದಿರಲಿ ನಾನು ಸದಾಕಾಲ ನಿಮ್ಮ ಪರವಾಗಿ ಇರುತ್ತೇನೆ ಎಂದು ಹೇಳಿದರು.

Leave a Reply

error: Content is protected !!
LATEST
ಸೆ.12ರಂದು 5 ಭಾಷೆಗಳಲ್ಲಿ ಬೆಳ್ಳಿತೆರೆ ಮೇಲೆ ARM- ಚಿತ್ರದ ಟ್ರೈಲರ್‌ಗೆ ಭಾರೀ ಮೆಚ್ಚುಗೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಬೇಕೇಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ ಮೈಸೂರು: ಕಲುಷಿತ ನೀರು ಸೇವಿಸಿ 12ಮಂದಿಗೆ ವಾಂತಿ, ‌ಭೇದಿ, ಓರ್ವ ಮೃತ ಬಾಲಿವುಡ್‌ ನಟಿ ಮಲೈಕಾ ಅರೋರಾ ತಂದೆ ಆತ್ಯಹತ್ಯೆ KSRTC ನೌಕರರ ಕಿತ್ತು ತಿನ್ನುವ ಭ್ರಷ್ಟರು: ಹೋಟೆಲ್‌ಗೆ ತಿನ್ನಲು ಹೋಗಿ ನೌಕರನಿಗೆ ಫೋನ್‌ ಪೇ ಮಾಡಲು ಹೇಳಿದ ಎಟಿಐ ಗಂಗಾಧ... KSRTC ಮಂಡ್ಯ: ಓವರ್‌ಟೇಕ್‌ ನೆಪದಲ್ಲಿ ತಾನೇ ಬಸ್‌ಗೆ ಬೈಕ್‌ ಡಿಕ್ಕಿ ಹೊಡೆಸಿ ಅಪಘಾತದ ಹೈಡ್ರಾಮ ಮಾಡಿದ ಬೈಕ್‌ ಸವಾರ ಯೋಗ... KSRTC: ಆ‌ರ್‌ಟಿಒ ಚಾಲನಾ ಪರವಾನಗಿ ಅಮಾನತುಗೊಳಿಸಿದ ಚಾಲಕರಿಗೆ ಡ್ಯೂಟಿ ಕೊಟ್ಟರೆ ಕ್ರಮ- ಡಿಸಿ ಸೂಚನೆ ಆರೋಗ್ಯ ಶಿಬಿರ ಸಾಮಾಜಿಕ ಜವಾಬ್ದಾರಿ: ನ್ಯಾಯ ಸಮಿತಿ ಅಧ್ಯಕ್ಷ ಸಚಿನ್ ಶಿರವಾಳ ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನಲ್ಲ: ಗೃಹ ಸಚಿವ ಪರಮೇಶ್ವರ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡುವುದರಲ್ಲಿ ಎಳ್ಳಷ್ಟೂ ಅನುಮಾನವಿಲ್ಲ : ಬಿವೈವಿ