NEWSನಮ್ಮರಾಜ್ಯಲೇಖನಗಳು

ಸಾರಿಗೆ ನೌಕರರ ಕಷ್ಟಕ್ಕೆ ಸ್ಪಂದಿಸಿ: ಸಿಎಂ, ಸಚಿವರಿಗೆ ರೈತ ಮಹಿಳೆ ಮನವಿ

ವಿಜಯಪಥ ಸಮಗ್ರ ಸುದ್ದಿ

ಸಾರಿಗೆ ಸಚಿವರು ಹಾಗೂ ಮುಖ್ಯಮಂತ್ರಿಗಳು ನೌಕರರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ದಿಟ್ಟ, ಸೂಕ್ತವಾದ ಕ್ರಮ ತೆಗೆದುಕೊಂಡು ಒಂದು ಸರಿಯಾದ ನ್ಯಾಯ ಒದಗಿಸಿಕೊಡುವುದು ಜರೂರಾಗಿ ಆಗಬೇಕಿದೆ.

ನೌಕರರಿಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಗೂ 2024ರ ಜ.1ರಿಂದ ಆಗಬೇಕಿರುವ ವೇತನ ಹೆಚ್ಚಳ ಆಗದೆ  ಅನ್ಯಾಯ ಆಗುತ್ತಿರುವುದರ ಬಗ್ಗೆ ನಾಡಿನ ದೊರೆಯಾದ ನೀವು ಗಮನ ಕೊಡಬೇಕು.

ಇದರಿಂದ ಜತೆಗೆ  ನೌಕರರಿಗೆ ಸಣ್ಣಪುಟ್ಟ ತಪ್ಪಿಗೆ ಅತೀ ಶೀಘ್ರಗತಿಯಲ್ಲಿ ಶಿಕ್ಷೆ ಕೊಡುವ ಅಧಿಕಾರಿಗಳ ಸಂಖ್ಯೆ ನಾಲ್ಕೂ ನಿಗಮಗಳಲ್ಲೂ ಹೆಚ್ಚಾಗಿದ್ದು ಇದಕ್ಕೂ ಕಡಿವಾಣ ಹಾಕಬೇಕು.

ಇನ್ನು ನಿಮ್ಮ ಸರ್ಕಾರ ಬಂದ ಮೇಲೆ ಶಕ್ತಿ ಯೋಜನೆಯಡಿ ಉಚಿತವಾಗಿ ನಾಡಿನ ಸಮಸ್ತ ಮಹಿಳೆಯರು ನಾನು ಸೇರಿದಂತೆ ಉಚಿತವಾಗಿ ಪ್ರಯಾಣಿಸುತ್ತಿದ್ದೇವೆ. ಆದರೆ, ಇದರಿಂದ ನೌಕರರಿಗೆ ಒತ್ತಡ ಹೆಚ್ಚಾಗಿದ್ದು, ಆ ಒತ್ತಡದಲ್ಲೇ ಕೆಲಸ ಮಾಡುತ್ತಿದ್ದಾರೆ. ವೇತನ ಮಾತ್ರ ಭಾರಿ ಕಡಿಮೆ. ಹೀಗೆ ಅದು ಕೂಡ ನಿಮ್ಮ ಸರ್ಕಾರದಲ್ಲಿ ಆಗುತ್ತಿರುವ ಭಾರಿ ನೋವು ತರಿಸುತ್ತಿದೆ.

ಇನ್ನು ಈ ನಡುವೆ ದೊಡ್ಡದೊಡ್ಡ ತಪ್ಪನ್ನು ಮಾಡುವ ಅಧಿಕಾರಿಗಳಿಗೆ ಯಾವುದೇ ರೀತಿಯ ಶಿಕ್ಷೆ ಆಗುತ್ತಿಲ್ಲ. ಏನೊಂದು ತಪ್ಪು ಮಾಡದ ನೌಕರರು ಮಾತ್ರ ಇಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ನಾನು ನೋಡಿದ್ದೇನೆ. ಮತ್ತು ಕೇಳಿದ್ದೇನೆ. ಈಗಲೂ ಅದನ್ನು ಗಮನಿಸುತ್ತಿದ್ದೇನೆ.

ಇಲಾಖೆಯಲ್ಲಿ ಭ್ರಷ್ಟಾಚಾರ, ಲೂಟಿ ಮಾಡುವ ಅಧಿಕಾರಿಗಳ ವಿರುದ್ಧ ಸರಿಯಾದ ತನಿಖೆ ಮಾಡುತ್ತಿಲ್ಲ. ಈ ರೀತಿಯ ವಿಳಂಬ ಧೋರಣೆಯಿಂದ ಅಧಿಕಾರಿಗಳು ತಾವು ಮಾಡಿದ ತಪ್ಪುಗಳನ್ನು ಮುಚ್ಚಿಕೊಳ್ಳುತ್ತಿದ್ದಾರೆ.

ಅಷ್ಟೇ ಅಲ್ಲ ನೌಕರರಿಗೆ ಶಿಕ್ಷೆ ನೀಡುವ ಅಧಿಕಾರಿಗಳು ತಮಗೆ ಸರಿ ಸಮಾನವಾದ ಅಧಿಕಾರಿಗಳ ವಿಚಾರಣೆ ಮಾಡಲು ಸಾಧ್ಯವಿದೆಯೇ? ಇದರಿಂದಲೇ ಬರಿ ನೌಕರರಿಗೆ ಮಾತ್ರ ಶಿಕ್ಷೆಯಾಗುತ್ತಿದ್ದು, ಅಧಿಕಾರಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಅನುಕೂಲವಾಗುತ್ತಿದೆ. ಈ ನಿಯಮ ಬದಲಾಗಬೇಕಿದೆ.

ನೌಕರರಿರಲಿ, ಅಧಿಕಾರಿಗಳಿರಲಿ ಯಾರೇ ತಪ್ಪು ಮಾಡಿದರೂ ಸಮಾನವಾದ ತಪ್ಪಿಗೆ ಸಮಾನ ಶಿಕ್ಷೆ ಕೊಡಬೇಕು. ಆದರೆ, ಸಾರಿಗೆಯಲ್ಲಿ ಅಂತ ಯಾವುದೇ ನಿಯಮವಿಲ್ಲದಂತೆ ಅಧಿಕಾರಿಗಳು ತಪ್ಪಿಸಿಕೊಂಡು ನೌಕರರಿಗೆ ಮಾತ್ರ ಶಿಕ್ಷೆ ನೀಡುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ.

ಈ ಸಂಸ್ಥೆಯಲ್ಲಿ, ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎಂಬಂತೆ ಸಿಕ್ಕಿದಷ್ಟು ಬಾಚಿಕೊಳ್ಳುವ ಅಧಿಕಾರಿಗಳ ದಂಡು ಹೆಚ್ಚಾಗಿದೆ. ಪ್ರಾಮಾಣಿಕ ಅಧಿಕಾರಿಗೆ ಇಲ್ಲಿ ಬೆಲೆ ಇಲ್ಲದಂತಾಗಿದೆ.

ಇತ್ತ ಶಕ್ತಿ ಯೋಜನೆ ಜಾರಿ ಮಾಡಿದ್ದು ಸಾರಿಗೆ ಸಂಸ್ಥೆಗಳಿಗೆ ಬರುವ ಆದಾಯ ಹೆಚ್ಚಾಗಬೇಕಿತ್ತು, ಆದರೆ, ನೀವು ಕಾಲಕಾಲಕ್ಕೆ ಉಚಿತ ಪ್ರಯಾಣದ ಹಣವನ್ನು ಬಿಡುಗಡೆ ಮಾಡದೆ ಪ್ರಸ್ತುತ ಆದಾಯಕ್ಕೂ ಕತ್ತರಿ ಬೀಳುತ್ತಿದೆ. ಜತೆಗೆ ಹಲವಾರು ರೀತಿಯ ಉಚಿತ ಪಾಸ್‌ಗಳನ್ನು ಸರ್ಕಾರ ಕೊಟ್ಟಿದ್ದು, ಅದನ್ನು ಸಂಸ್ಥೆ ಮೇಲೆ ಹೇರಿ ಲಾಸ್‌  ಆಗುವಂತೆ ಮಾಡಲಾಗುತ್ತಿದೆ.

ಇನ್ನು ಆದಾಯ ಎಲ್ಲಿ ದಾರಿ ತಪ್ಪಿದೆ ಎಂಬ ವಿಚಾರ ಮಾಡದೆ, ನೌಕರರನ್ನೇ ಟಾರ್ಗೆಟ್ ಮಾಡಿ ಅವರಿಗೆ, ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದು ದುಃಖಕರ ಸಂಗತಿ. ಹಗಲು ರಾತ್ರಿ ಎನ್ನದೆ ದುಡಿಯುತ್ತಿದ್ದರೂ ಅದರ ಫಲ ನೌಕರರಿಗೆ ಸಿಗದಿರುವುದು ನಿಜಕ್ಕೂ ನೋವಿನ ಸಂಗತಿ.

ಒಬ್ಬ ನೌಕರನಿಗೆ ಆಗುವ ತೊಂದರೆಗಳನ್ನು ಮನಗಂಡು ವಿಚಾರವನ್ನು ಮಾಡಿದರೆ, ಅದಕ್ಕೆ ಉತ್ತರ ಸಿಗುವುದು. ಆದರೆ, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎಂಬಂತೆ ಅಧಿಕಾರಿಗಳು ನೌಕರರ ಕಷ್ಟ ಆಲಿಸದೆ ಶಿಕ್ಷೆಕೊಡಲು ಮುಂದಾಗುವುದು ಎಷ್ಟು ಸರಿ?

ಇದರ ನಡುವೆ ಯಾವು ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಹಾಗೂ ಹಿಂಬಾಕಿ ಬಿಡುಗಡೆ ಮಾಡದೆ ಇನ್ನಷ್ಟು ಹಿಂಸೆ ಕೊಡುತ್ತಿದ್ದೀರಿ ಇದೆಲ್ಲವನ್ನು ಬಿಟ್ಟು   ರಾಜ್ಯದ ದೊರೆ  ಮುಖ್ಯಮಂತ್ರಿಗಳಾದ ತಾವು ಪರಿಹಾರ ಕೊಡಬೇಕು.  ಅಷ್ಟೇ ಅಲ್ಲ ಅಧಿಕಾರಿಗಳಿಗೂ ಅವರ ತಪ್ಪಿಗೆ ತಕ್ಕ ಶಿಕ್ಷೆ ಕೊಡಬೇಕು.

ಈ  ನೌಕರರ ಎಲ್ಲ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ, ಅವರು ಸಮ ಸಮಾಜದಲ್ಲಿ ಇತರರಂತೆ ಬದುಕಲು ಅವಕಾಶಮಾಡಿ ಕೋಡಿ ಎಂದು ತಮ್ಮಲ್ಲಿ ಮನವಿ ಮಾಡುತ್ತಿದ್ದೇನೆ.

l ಭಾಗ್ಯಶ್ರೀ, ರೈತ ಮಹಿಳೆ, ಬನ್ನೂರು

Megha
the authorMegha

Leave a Reply

error: Content is protected !!