ಬೆಂಗಳೂರು: ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ನೇತೃತ್ವದಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಆವರಣದಲ್ಲಿ ʻಪೊರಕೆಯೇ ಪರಿಹಾರʼ ಸ್ವಚ್ಛತಾ ಅಭಿಯಾನ ನಡೆಸಿ, ಅಲ್ಲಿಂದ ಬೃಹತ್ ಮೆರವಣಿಗೆಯಲ್ಲಿ ಸಾಗಿ, ಫ್ರೀಡಂ ಪಾರ್ಕ್‌ನಲ್ಲಿ ಬಹಿರಂಗ ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಪೃಥ್ವಿ ರೆಡ್ಡಿ ಅವರು, ಪ್ರಸ್ತುತ ಫ್ರೀಡಂ ಪಾರ್ಕನ್ನು ಸರಿಯಾಗಿ ಗಮನಿಸಿದರೆ ರಾಜ್ಯ ಬಿಜೆಪಿ ಸರ್ಕಾರದ ಆಡಳಿತ ಹೇಗಿದೆ ಎಂದು ಸ್ಪಷ್ಟವಾಗಿ ಅರಿವಾಗುತ್ತದೆ. ವಿವಿಧ ಸರ್ಕಾರಿ ನೌಕರರು, ಕಾರ್ಮಿಕರು, ಶಿಕ್ಷಕರು, ಉಪನ್ಯಾಸಕರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಿಬ್ಬಂದಿ ಸೇರಿದಂತೆ ಅನೇಕ ವರ್ಗಗಳ ಜನರು ಇಲ್ಲಿ ನ್ಯಾಯಕ್ಕಾಗಿ ವಿವಿಧ ಪ್ರತಿಭಟನೆಗಳನ್ನು ಮಾಡುವುದು ಸಾಮಾನ್ಯವಾಗಿದೆ. ಇದು ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯಿದೆ ಹಾಗೂ ಅದಕ್ಕೆ ಅಂತ್ಯ ಹಾಡಲು ಜನರು ನಿರ್ಧರಿಸಿದ್ದಾರೆ ಎಂಬುದರ ಸಂಕೇತ ಎಂದು ಹೇಳಿದರು.
ಇನ್ನು ಭ್ರಷ್ಟಾಚಾರ, ಅನ್ಯಾಯ, ಅಕ್ರಮ ಮುಂತಾದ ಕಸಗಳಿಗೆ ಪೊರಕೆಯೇ ಪರಿಹಾರ. ಆದ್ದರಿಂದ ಕರ್ನಾಟಕದ ಜನರು ಈ ಬಾರಿ ಪೊರಕೆಯನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು.
ಒಂದು ದಶಕದ ಹಿಂದೆ ಇದೇ ಫ್ರೀಡಂ ಪಾರ್ಕ್‌ನಲ್ಲಿ ನಾವು ಭ್ರಷ್ಟಾಚಾರ ವಿರೋಧಿ ಭಾರತ ಹೆಸರಿನಲ್ಲಿ ಪ್ರತಿಭಟನೆಗೆ ಕುಳಿತಿದ್ದೆವು. ಆಗ, ರಾಜಕೀಯ ಪ್ರವೇಶಿಸಿ ನಂತರ ಮಾತಾಡಿ ಎಂದು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರವು ನಮಗೊಂದು ಸವಾಲು ಹಾಕಿತು. ರಾಜಕೀಯ ಪ್ರವೇಶಿಸುವ ಉದ್ದೇಶವನ್ನೇ ಹೊಂದಿಲ್ಲದ ನಾವು ಆ ಸವಾಲು ಸ್ವೀಕರಿಸಿ ಆಮ್ ಆದ್ಮಿ ಪಾರ್ಟಿಯನ್ನು ರಚಿಸಿ, ಜನವಿರೋಧಿ ಆಡಳಿತಗಳನ್ನು ಕೊನೆಗಾಣಿಸುತ್ತಾ ಸಾಗಿದೆವು.
ಈಗ ಎರಡು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದು ಜನಪರ ಹಾಗೂ ಪಾರದರ್ಶಕ ಆಡಳಿತ ನೀಡುತ್ತಿದ್ದೇವೆ ಹಾಗೂ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ್ದೇವೆ. ಇದೇ ಮಾದರಿಯಲ್ಲಿ, ಇಲ್ಲಿ ನಡೆಯುತ್ತಿರುವ ಪ್ರತಿಭಟನೆಗಳೆಲ್ಲ ಒಗ್ಗೂಡಿ ಕರ್ನಾಟಕದ ಭ್ರಷ್ಟ ಹಾಗೂ ಜನವಿರೋಧಿ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಪೃಥ್ವಿ ರೆಡ್ಡಿ ಹೇಳಿದರು.
ಆಮ್ ಆದ್ಮಿ ಪಾರ್ಟಿ ರಾಜ್ಯ ಕಾರ್ಯಾಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಆಪರೇಷನ್ ಕಮಲದ ಮೂಲಕ ಅನೈತಿಕವಾಗಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯು ನಿರಂತರವಾಗಿ ಅಕ್ರಮಗಳನ್ನು ಮಾಡುತ್ತಲೇ ಬಂದಿದೆ. ಹಲವು ಹಗರಣಗಳ ಆರೋಪಗಳು ದಾಖಲೆಸಹಿತ ಹೊರಬರುತ್ತಿದ್ದರೂ ಸೂಕ್ತ ತನಿಖೆ ನಡೆಸಲು ಬಿಜೆಪಿ ಸರ್ಕಾರ ಮುಂದಾಗಿಲ್ಲ ಎಂದು ಕಿಡಿಕಾರಿದರು.
ಇನ್ನು ಮಾಡಬೇಕಾದ ಕೆಲಸವನ್ನು ಬಿಟ್ಟು ಭ್ರಷ್ಟರನ್ನು ರಕ್ಷಿಸುತ್ತಾ, ರಾಜ್ಯವನ್ನು ಲೂಟಿ ಮಾಡುತ್ತಿರುವ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಿ. ಈ ಮೂಲಕ ಪಾರದರ್ಶಕ ಹಾಗೂ ಜನಪರ ಆಡಳಿತವನ್ನು ದೆಹಲಿ ಹಾಗೂ ಪಂಜಾಬ್‌ನಂತೆ ಇಲ್ಲೂ ತರಬೇಕು ಎಂದು ಮನವಿ ಮಾಡಿದರು.
ಆಮ್ ಆದ್ಮಿ ಪಾರ್ಟಿ ಮುಖಂಡರಾದ ಮುಖ್ಯಮಂತ್ರಿ ಚಂದ್ರು, ಬ್ರಿಜೇಶ್ ಕಾಳಪ್ಪ, ಸುರೇಶ್ ರಾಥೋಡ್, ಬಿ.ಕೆ.ಶಿವಪ್ಪ, ಸೌಂದರ್ಯ ಕೀರ್ತನ್, ರವಿಚಂದ್ರ, ಲಕ್ಷ್ಮೀಕಾಂತ ರಾವ್, ಡಾ. ಸತೀಶ್ ಕುಮಾರ್, ಅಶೋಕ್ ಮೃತ್ಯುಂಜಯ, ಗಿರೀಶ್ ನಾಯ್ಡು, ಉಷಾ ಮೋಹನ್ ಮತ್ತಿತರ ನಾಯಕರು ಭಾಗವಹಿಸಿದ್ದರು.