ರಾಜ್‌ಕೋಟ್: ಭಯೋತ್ಪಾದಕರ ವಿರುದ್ಧ ಹೋರಾಡುವ ಅಥವಾ ಸ್ಫೋಟಕಗಳು, ಮಾದಕ ವಸ್ತುಗಳನ್ನು ಪತ್ತೆಹಚ್ಚುವ ಮೂಲಕ ತಮ್ಮ ಶೌರ್ಯ ಪ್ರದರ್ಶಿಸುವ ಪೊಲೀಸ್ ನಾಯಿಗಳು ನಿಧನವಾದರೆ ಅವುಗಳಿಗೆ ಗೌರವ ಸಲ್ಲಿಸುವ ಸಲುವಾಗಿ ಸಮಾಧಿ ಮಾಡಲಾಗುತ್ತದೆ. ಅದೆಲ್ಲವನ್ನು ನಾವೆಲ್ಲರೂ ನೋಡಿದ್ದೇವೆ.
ಆದರೆ, ಅದಕ್ಕೆ ಭಿನ್ನವಾದ ಮಾರ್ಗ ಅನುಸರಿಸಿದ ಅಮ್ರೇಲಿಯ ರೈತ ಕುಟುಂಬವು ತನ್ನ ವಯಸ್ಸಾದ ಪ್ರೀತಿಯ ಕಾರಿಗೆ ಗೌರವಯುತವಾಗಿ ಸಮಾಧಿ ಮಾಡುವ ಮೂಲಕ ಅದಕ್ಕೆ ಗೌರವ ಸಲ್ಲಿಸಿದ್ದಾರೆ. ಈ ಅಂತ್ಯಕ್ರಿಯೆಯಲ್ಲಿ 1500ಕ್ಕೂ ಹೆಚ್ಚು ಮಂದಿ ಭಾಗಿಯಾಗಿದ್ದಾರೆ.
ಹೌದು, ಕಾರು ಮಾಲೀಕ ಸಂಜಯ್ ಪೋಲ್ರಾ ಅವರು ಕುಟುಂಬಕ್ಕೆ ಅಪಾರ ಸಮೃದ್ಧಿ ಯಶಸ್ಸು ಸಿಕ್ಕಿರುವುದು 2006ರಲ್ಲಿ ಕಾರು ಖರೀದಿಸಿದ ಮೇಲೆ. ಕಾರು ಮನಗೆ ಬಂದ ಬಳಿಕ ನಮಗೆ ಸಾಮಾಜಿಕ ಸ್ಥಾನಮಾನ ಹೆಚ್ಚಾಗಿದೆ ಎಂದು ಹೇಳಿಸಿದ್ದಾರೆ.
ವಿವರ: ಗುಜರಾತ್ ರಾಜ್ಯದ ಅಮ್ರೇಲಿ ಜಿಲ್ಲೆಯ ಈ ರೈತ ತಮ್ಮ “ಅದೃಷ್ಟ” ಕಾರಿಗೆ ಅದ್ದೂರಿ ಸಮಾಧಿ ಕಾರ್ಯಕ್ರಮವನ್ನು ಅಂದರೆ ಅಂತ್ಯಕ್ರಿಯೆ ನೆರವೇರಿಸಿದ ಬಳಿಕ ಇದೀಗ ಸಾಮಾಜಿಕ ಜಾಲಾತಾಣದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ.
ಲಾಠಿ ತಾಲೂಕಿನ ಪಾದರಶಿಂಗ ಗ್ರಾಮದಲ್ಲಿ ಗುರುವಾರ ಸಂಜಯ್ ಪೋಲ್ರಾ ಮತ್ತು ಅವರ ಕುಟುಂಬ ಆಯೋಜಿಸಿದ್ದ ಕಾರಿನ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಆಧ್ಯಾತ್ಮಿಕ ಮುಖಂಡರು ಸೇರಿದಂತೆ 1,500 ಜನರು ಭಾಗವಹಿಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈವೆಂಟ್‌ನ ವೀಡಿಯೊ ಸಂಜಯ್ ಪೋಲ್ರಾ ಮತ್ತು ಅವರ ಕುಟುಂಬವು ತಮ್ಮ ಜಮೀನಿನಲ್ಲಿ ಕಾಋಿನ ಅಂತ್ಯಕ್ರಿಯೆಯ ಧಾರ್ಮಿಕ ಕ್ರಿಯೆಗಳನ್ನು ನಡೆಸುವುದನ್ನು ತೋರಿಸುತ್ತದೆ. ಅಲ್ಲಿ ಅವರ 18 ವರ್ಷದ ವ್ಯಾಗನ್ ಆರ್‌ಗಾಗಿ 15 ಅಡಿ ಆಳದ ಗುಂಡಿಯನ್ನು ತೋಡಿದ್ದಾರೆ.
ಹೂ, ಮಾಲೆಗಳಿಂದ ಅಲಂಕೃತಗೊಂಡಿದ್ದ ಕಾರನ್ನು ಅವರ ಮನೆಯಿಂದ ಸಂಜಯ್ ಪೋಲ್ರಾ ಅವರ ಜಮೀನಿಗೆ ಬಹಳ ಸಂಭ್ರಮದಿಂದ ಒಯ್ದು ಇಳಿಜಾರಿನಲ್ಲಿ ಓಡಿಸಿ ಬಳಿಕ ಕಾರಿನ ಅಂತ್ಯಕ್ರಿಯೆ ಮಾಡಲು ತೋಡಿದ್ದ ಗುಂಡಿಯಲ್ಲಿ ಇರಿಸಿದರು.
ಬಳಿಕ ವಾಹನಕ್ಕೆ ಹಸಿರು ಬಟ್ಟೆಯನ್ನು ಹೊದಿಸಿ, ಪುರೋಹಿತರು ಮಂತ್ರ ಪಠಿಸುತ್ತಿದ್ದಂತೆ ಕುಟುಂಬಸ್ಥರು ಪೂಜೆ ಸಲ್ಲಿಸಿ ಗುಲಾಬಿ ದಳಗಳನ್ನು ಸುರಿಸುವುದರ ಮೂಲಕ ಅಂತ್ಯಕ್ರಿಯೆ ನೆರವೇರಿಸಿದರು. ಕೊನೆಗೆ ಯಂತ್ರವನ್ನು ಬಳಸಿ ಕಾರಿನ ಮೇಲೆ ಮಣ್ಣು ಹಾಕುವ ಮೂಲಕ ಕಾರನ್ನು ಸಮಾಧಿ ಮಾಡಿದರು.
ಸೂರತ್‌ನಲ್ಲಿ ಕನ್‌ಸ್ಟ್ರಕ್ಷನ್ ಉದ್ಯಮ ಹೊಂದಿರುವ ಸಂಜಯ್ ಪೋಲ್ರಾ, ನಮ್ಮ ಕುಟುಂಬದ ಭವಿಷ್ಯದ ಪೀಳಿಗೆಗಳು ನಮಗೆ ಅದೃಷ್ಟವನ್ನು ತಂದ ಕಾರನ್ನು ನೆನಪಿಟ್ಟುಕೊಳ್ಳಲು ಈ ವಿಭಿನ್ನವಾದ ಸಮಾರಂಭವನ್ನು ಮಾಡಲು ಯೋಜಿಸಿ ಮಾಡಲಾಗಿದೆ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ಪೋಲ್ರಾ, “ನಾನು 18 ವರ್ಷಗಳ ಹಿಂದೆ ಈ ಕಾರನ್ನು ಖರೀದಿಸಿದೆ ಮತ್ತು ಇದು ಬಂದ ಮೇಲೆ ನಮ್ಮ ಕುಟುಂಬಕ್ಕೆ ಅದೃಷ್ಟ ಸಿಕ್ಕಿದೆ. ನಾವು ಮಾಡುವ ವ್ಯಾಪಾರದಲ್ಲಿ ಯಶಸ್ಸನ್ನು ಕಂಡಿದ್ದಲ್ಲದೆ ನಮ್ಮ ಕುಟುಂಬವು ಗೌರವವನ್ನು ಗಳಿಸಿದೆ.
ವಾಹನವು ನನ್ನ ಕುಟುಂಬ ಮತ್ತು ನನಗೆ ಅದೃಷ್ಟದ ಲಕ್ಷ್ಮಿಯಾಗಿ ಸಿಕ್ಕಿತ್ತು. ಹೀಗಾಗಿ ಅದನ್ನು ಮಾರುವ ಬದಲು ನನ್ನ ಜಮೀನಿನಲ್ಲಿ ಸಮಾಧಿ ರೂಪದಲ್ಲಿ ಕಾಣುವುದು ಮೇಲು ಎನಿಸಿ ಈ ರೀತಿ ಮಾಡಿದ್ದೇವೆ. ಈ ಸಮಾರಂಭಕ್ಕೆ ₹ 4 ಲಕ್ಷ ಖರ್ಚು ಮಾಡಿದ ಸಂಜಯ್ ಪೋಲ್ರಾ, ಕುಟುಂಬದ ಅದೃಷ್ಟದ ಕಾರು ಮರದ ಕೆಳಗೆ ಇರುವುದನ್ನು ತಮ್ಮ ಮುಂದಿನ ಪೀಳಿಗೆಗೆ ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂಬ ನಿಟ್ಟಿನಲ್ಲೂ ಸಮಾಧಿ ಸ್ಥಳದಲ್ಲಿ ಮರವನ್ನು ನೆಡಲು ಯೋಜಿಸಲಾಗಿದೆ ಎಂದು ಹೇಳಿದರು.
ಕಾರನ್ನು ಹಿಂದೂ ಸಂಪ್ರದಾಯದಂತೆ ಮತ್ತು ಧರ್ಮಗುರುಗಳು ಮತ್ತು ಧಾರ್ಮಿಕ ಮುಖಂಡರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಸುಮಾರು 1,500 ಜನರನ್ನು ಆಹ್ವಾನಿಸಿ ಔತಣವನ್ನು ಏರ್ಪಡಿಸಲಾಗಿತ್ತು.