ರಾಂಚಿ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾರ್ಖಂಡ್ನ ರಾಂಚಿಯ ಹಲವು ಭಾಗಗಳಲ್ಲಿ ದಾಳಿ ನಡೆಸಿ ಕೋಟಿಕೋಟಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಸಚಿವ ಅಲಂಗೀರ್ ಆಲಂ ಅವರ ಆಪ್ತಕಾರ್ಯದರ್ಶಿ ಸಂಜೀವ್ ಲಾಲ್ ಮನೆಯಲ್ಲಿ ರಾಶಿಯಾಕಿದ್ದ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಈ ರಾಶಿ ರಾಶಿ ಹಣವನ್ನು ಕಂಡು ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ.
ಮೂಲಗಳ ಪ್ರಕಾರ ಬರೋಬ್ಬರಿ 30 ಕೋಟಿ ರೂ.ಗಳಿಗೂ ಅಧಿಕ ಹಣ ಪತ್ತೆಯಾಗಿದೆ ಎಂದು ಅಂದಾಜಿಸಲಾಗಿದೆ. ಹಣದ ಪರ್ವತವನ್ನೇ ಗುಡ್ಡೆ ಹಾಕಿರುವ ಅಧಿಕಾರಿಗಳು ಅವುಗಳ ಮೊತ್ತವನ್ನು ಎಣಿಸಲು ಯಂತ್ರಗಳನ್ನು ತರಿಸಿಕೊಳ್ಳುತ್ತಿದ್ದಾರೆ.
ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಇಂಜಿನಿಯರ್ ವೀರೇಂದ್ರ ಕೆ.ವಿರುದ್ಧ 2023ರಲ್ಲಿ ಕೇಸ್ ದಾಖಲಾಗಿದೆ. ಯೋಜನೆಗಳ ಅನುಷ್ಠಾನದಲ್ಲಿ ಅಕ್ರಮ ನಡೆದಿದೆ, ಅಕ್ರಮ ಹಣ ವರ್ಗಾವಣೆಯಾಗಿದೆ ಎಂಬ ಆರೋಪದ ಮೇರೆಗೆ ಇಡಿ ಅಧಿಕಾರಿಗಳು ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇನ್ನು ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಜತೆ ಸಚಿವರಿಗೆ ಸಂಪರ್ಕ ಇದೆ. ಅವರ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅಕ್ರಮವಾಗಿ ಸಂಪಾದಿಸಿದ ಹಣ ಅವರ ಆಪ್ತರ ಮನೆಗೆ ಹೋಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
ಇದೇ ಪ್ರಕರಣದಲ್ಲಿ ಇಂದು ಇಡಿ ಅಧಿಕಾರಿಗಳು ದಾಳಿ ಮಾಡಿದ್ದು, ಅಪಾರ ಪ್ರಮಾಣದ ಕಪ್ಪು ಹಣದ ಭಾಗವೆಂದು ಇಡಿ ಅಧಿಕಾರಿಗಳು ನಂಬಿದ್ದಾರೆ. ಅಲಂಗೀರ್ ಆಪ್ತ ಕಾರ್ಯದರ್ಶಿಯ ನಿವಾಸದಲ್ಲಿ ಸಿಕ್ಕಿರುವ ಹಣದ ರಾಶಿಯನ್ನು ಕಂಡು ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ.
ಅಲಂಗೀರ್ ಆಲಂ ..? ಅಲಂಗೀರ್ ಆಲಂ ಅವರು ಪಾಕುರ್ ವಿಧಾನಸಭೆ ಕ್ಷೇತ್ರದ ಶಾಸಕ. ನಾಲ್ಕು ಬಾರಿ ಶಾಸಕನಾಗಿ ಆಯ್ಕೆ ಆಗಿರುವ ಇವರು, ಜಾರ್ಖಂಡ್ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವರಾಗಿದ್ದಾರೆ.
ಇದಕ್ಕೂ ಮೊದಲು ಅಲಂಗೀರ್ ಅಲಂ ಅಂದರೆ 2006, ಅಕ್ಟೋಬರ್ 20 ರಿಂದ 2009 ಡಿಸೆಂಬರ್ ವರೆಗೆ ಜಾರ್ಖಂಡ್ ವಿಧಾನಸಭೆಯ ಸ್ಪೀಕರ್ ಆಗಿದ್ದರು. 2000ರಲ್ಲಿ ನಡೆದ ಚುನಾವಣೆಯಲ್ಲಿ ಮೊದಲ ಬಾರಿಗೆ ವಿಧಾನಸಭೆಯನ್ನು ಪ್ರವೇಶ ಮಾಡಿದ್ದರು. ನಂತರ 4 ಬಾರಿ ಶಾಸಕರಾಗಿದ್ದಾರೆ.