ನರ್ನಾಲ್: ಶಾಲಾ ಬಸ್ವೊಂದು ಮರಕ್ಕೆ ಡಿಕ್ಕಿಯಾಗಿ ಉರುಳಿ ಬಿದ್ದ ಪರಿಣಾಮ 6 ಮಕ್ಕಳು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಕ್ಕಳು ಗಂಭಿರವಾಗಿ ಗಾಯಗೊಂಡಿರುವ ಘಟನೆ ಹರಿಯಾಣದ ನರ್ನಾಲ್ನ ಉನ್ಹಾನಿ ಗ್ರಾಮದ ಬಳಿ ನಡೆದಿದೆ.
ಇಂದು ಬೆಳಗ್ಗೆ ಅಪಘಾತ ಸಂಭವಿಸಿದ್ದು, ರಂಜಾನ್ಗೆ ಶಾಲೆ ರಜೆ ಕೊಡದೇ ಕೆಲಸ ಮಾಡುತ್ತಿರುವುದು ಕೂಡ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ನಗರದ ಜಿಎಲ್ ಪಬ್ಲಿಕ್ ಸ್ಕೂಲ್ಗೆ ಸೇರಿದ ಬಸ್ ಡ್ರೈವರ್ ಮದ್ಯಪಾನ ಮಾಡಿ ಬಸ್ ಚಾಲನೆ ಮಾಡಿಕೊಂಡು ಬಂದು ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಬಸ್ ನೆಲಕ್ಕೆ ಉರುಳಿ ಬಿದ್ದಿದ್ದು, 6 ಮಕ್ಕಳು ಅಸುನೀಗಿದ್ದಾರೆ.
ಇನ್ನು 20ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದು ಆ ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ರಕ್ಷಣೆಗೆ ಬಂದಿದ್ದರಿಂದ ಕೆಲವು ಮಕ್ಕಳ ಪ್ರಾಣ ಉಳಿಸಿದೆ. ಇತ್ತ ಮಾಹಿತಿ ತಿಳಿದು ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು.
ಚಾಲಕ ಮದ್ಯಪಾನ ಮಾಡಿದ್ದರಿಂದ ಈ ದೊಡ್ಡ ಅವಘಡ ಸಂಭವಿಸಿದೆ. ಅತಿ ವೇಗವಾಗಿ ಬಂದು ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮಕ್ಕಳು ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನು ಪ್ರಮುಖವಾಗಿ ಬಸ್ಸಿನ ದಾಖಲೆಗಳು ಮುಗಿದು ಹೋಗಿ 6 ವರ್ಷಗಳಾಗಿದ್ದರು ಆ ಬಸ್‌ಅನ್ನು ಹಾಗೆಯೇ ಚಾಲನೆ ಮಾಡುತ್ತಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದ್ದು ಶಾಲಾ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಜರುಗಿಸುವುದಕ್ಕೆ ಪೊಲೀಸರು ಮುಂದಾಗಿದ್ದಾರೆ.