ಬೆಂಗಳೂರು: ಕರೆಂಟ್ಅನ್ನು 200 ಯೂನಿಟ್ವರೆಗೆ ಉಚಿತವಾಗಿ ನೀಡುವ ಯೋಜನೆಗೆ ಸರ್ಕಾರ ನಿನ್ನೆಯಿಂದ (ಜೂ.18) ಅರ್ಜಿ ಹಾಕಲು ಅವಕಾಶ ನೀಡಿದೆ. ಆದರೆ ಏಕಕಾಲಕ್ಕೆ ಲಕ್ಷ ಲಕ್ಷ ಮಂದಿ ಅರ್ಜಿ ಸಲ್ಲಿಸಲು ಮುಂದಾಗುತ್ತಿರುವುದರಿಂದ ಸರ್ವಡೌನ್ ಸಮಸ್ಯೆ ಎದುರಿಸುವಂತಾಗಿದೆ.
ಇದರ ದುರುಪಯೋಗ ಪಡಿಸಿಕೊಳ್ಳಲು ಸೈಬಸ್ ಕಳ್ಳಲು ಮುಂದಾಗುವ ಆತಂಕವಿದೆ ಎಂದು ಸೈಬರ್ ಕ್ರೈಂ ತಜ್ಞರು ಹೇಳುತ್ತಿದ್ದು, ಯಾವುದೇ ಕಾರಣಕ್ಕೂ ನೀವು OTPಯನ್ನು ಯಾರೊಂದಿಗೂ ಫೋನ್ ಸಂಭಾಷಣೆ ಮೂಲಕ ಶೇರ್ ಮಾಡಿಕೊಳ್ಳಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
ಹೌದು! ನಾ ಮುಂದು, ತಾ ಮುಂದು ಎಂದು ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆ ಮಾಡಲು ಜನರು ಮುಂದಾಗುತ್ತಿದ್ದಾರೆ. ಹೀಗಾಗಿ ಏಕಕಾಲದಲ್ಲಿ 5 ಕೋಟಿಗೂ ಅಧಿಕ ಜನರು ಅರ್ಜಿ ಸಲ್ಲಿಕೆ ಮಾಡಿದರೆ ಸೇವಾ ಸಿಂಧು ಪೋರ್ಟಲ್ಗೆ ಅದನ್ನು ತಡೆಯುವ ಸಾಮರ್ಥ್ಯ ಇದೆಯಾ ಎಂಬ ಪ್ರಶ್ನೆ ಎದ್ದಿದೆ. ಅದನ್ನೇ ಬಂಡವಾಳ ಮಾಡಿಕೊಂಡಿರುವ ಸೈಬರ್ ಕಳ್ಳರು ಅಮಾಯಕ ಜನರನ್ನು ವಂಚಿಸಲು ಮುಂದಾಗಿದ್ದಾರೆ ಎಂದು ಸೈಬರ್ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ಸೇವಾ ಸಿಂಧು ಪೋರ್ಟಲ್ನಲ್ಲಿ ಎಲ್ಲರೂ ಏಕಕಾಲದಲ್ಲಿ ಲಾಗ್ ಇನ್ ಆಗುತ್ತಿರುವುದರಿಂದ ಸರ್ವರ್ ಸಮಸ್ಯೆ ಕಾಣುತ್ತಿದೆ. ಸರ್ವರ್ ಲೋಡ್ ಹೆಚ್ಚು ಮಾಡುವ ಪ್ರಯತ್ನ ಸರ್ಕಾರ ಮಾಡಬಹುದು. ಆದರೆ ಕೆಲವೇ ತಿಂಗಳಿಗಾಗಿ ಬ್ಯಾಂಡ್ ವಿಡ್ತ್ ಹೆಚ್ಚು ಮಾಡುವುದು ಕಷ್ಟ. ಇದನ್ನೆ ದುರ್ಬಳಕೆ ಮಾಡಿಕೊಂಡು ಜನರನ್ನು ಮೋಸದ ಬಲೆಗೆ ಬೀಳಿಸಲು ಸೈಬರ್ ವಂಚಕರು ಕಾಯುತ್ತಿದ್ದಾರೆ. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ತಜ್ಞರು ತಿಳಿಸಿದ್ದಾರೆ.
ಈ ವೇಳೆ ಸೈಬರ್ ಕ್ರೈಂ ತಪ್ಪಿಸುವುದು ಬಹಳ ಮುಖ್ಯವಾಗುತ್ತದೆ. ಮಾಹಿತಿ ಹಾಗೂ ದತ್ತಾಂಶ ಸೋರಿಕೆಯಾಗದಂತೆ ತಡೆಯಬೇಕು. ಮುಖ್ಯವಾಗಿ ನೋಂದಣಿ ಬಳಿಕ ಜನರು ಒಟಿಪಿ ಸಂಖ್ಯೆಯನ್ನು ಎಲ್ಲಿಯೂ ಹಂಚಿಕೊಳ್ಳಬಾರದು ಎಂಬ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.
ಏಕ ಕಾಲದಲ್ಲಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದ್ದರಿಂದ ನಿನ್ನೆಯಂತೆ ಇಂದು ಕೂಡ ಬಹುತೇಕ ಕಡೆ ಸೇವಾ ಸಿಂಧು ಪೋರ್ಟಲ್ ಸರ್ವರ್ ಡೌನ್ ಆಗಿದೆ. ಹೀಗಾಗಿ ಅರ್ಜಿ ಸಲ್ಲಿಸಲು ಬಂದವರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆಯ ಹೊರತಾಗಿ ಮೊದಲ ದಿನವೇ 55 ಸಾವಿರ ಗೃಹ ಜ್ಯೋತಿ ಯೋಜನೆ ಅರ್ಜಿ ಸಲ್ಲಿಕೆಯಾಗಿದೆ.