ಪಿರಿಯಾಪಟ್ಟಣ: ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ತಾಲೂಕಿನ ಜಿ.ಬಸವನಹಳ್ಳಿ ಗ್ರಾಮದ ಬೆಟ್ಟದ ಮೇಲಿರುವ ಶ್ರೀ ಗಂಗಾಧರ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜಾ ಮತ್ತು ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆಡೆಯಿತು.
ಮಹಾ ಶಿವರಾತ್ರಿ ಹಬ್ಬದ ಅಂಗವಾಗಿ ತಾಲೂಕಿನ ಜಿ.ಬಸವನಹಳ್ಳಿ ಗ್ರಾಮದ ಶ್ರೀ ಗಂಗಾಧರ ಬಸವೇಶ್ವರಸ್ವಾಮಿ ಸೇವಾ ಟ್ರಸ್ಟ್ ಹಾಗೂ ಗ್ರಾಮಸ್ಥರ ಸಂಯುಕ್ತಾಶ್ರಯದಲ್ಲಿ ಶ್ರೀ ಗಂಗಾಧರ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಈ ಜಾತ್ರಾ ಮಹೋತ್ಸವಕ್ಕೆ ತಾಲೂಕಿನ ಹಿಟ್ನೆ ಹೆಬ್ಬಾಗಿಲು, ಕಗ್ಗುಂಡಿ, ತೆಲುಗಿನ ಕುಪ್ಪೆ, ಕಂದೇಗಾಲ, ಹಿಟ್ನಳ್ಳಿ, ಕೋಮಲಾಪುರ, ಬೆಕ್ಕರೆ, ಭುವನ ಹಳ್ಳಿ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದ ಭಕ್ತಾದಿಗಳು ಬೆಟ್ಟ ಹತ್ತಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ನಾರಾಯಣ್ ಮಾತನಾಡಿ, ಬೆಟ್ಟದ ಮೇಲಿರುವ ಶ್ರೀ ಗಂಗಾಧರ ಬಸವೇಶ್ವರಸ್ವಾಮಿ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ಜು, ಈ ದೇವಾಲಯವು ಗ್ರಾಮಸ್ಥರ ಹಾಗೂ ದಾನಿಗಳು ಮತ್ತು ಜನಪ್ರತಿನಿಧಿಗಳ ನೆರವಿನಿಂದ ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಸೇವಾ ಕಾರ್ಯಗಳನ್ನು ನೆರವೇರಿಸುತ್ತ ಬಂದಿದ್ದೇವೆ ಎಂದರು.
ಇನ್ನು ದೇವಾಲಯಕ್ಕೆ ಬರುವ ಭಕ್ತರು ಬೆಟ್ಟವನ್ನು ಹತ್ತಲು ಇಳಿಯಲು ಅನುಕೂಲವಾಗುವಂತೆ ಈಗಾಗಲೇ ರಸ್ತೆ ಹಾಗೂ ಮೆಟ್ಟಿಲುಗಳನ್ನು ನಿರ್ಮಿಸಲಾಗಿದ್ದು ಮುಂದಿನ ದಿನಗಳಲ್ಲಿ ಭಕ್ತರು ತಂಗಲು ಸಮುದಾಯ ಭವನ ನಿರ್ಮಾಣ ಮಾಡಬೇಕಿದೆ. ಇದಕ್ಕೆ ಸರ್ಕಾರ ಹಾಗೂ ದಾನಿಗಳು ಸಹಕಾರ ನೀಡಬೇಕು ಎಂದರು.
ಟ್ರಸ್ಟ್ ಅಧ್ಯಕ್ಷ ಕೃಷ್ಣ, ಗ್ರಾಮದ ಯಜಮಾನ ಶಟ್ಟಪ್ಪ, ಅಶೋಕ್, ಗ್ರಾಪಂ ಅಧ್ಯಕ್ಷೆ ರೂಪ ಚಂದ್ರು, ಮುಖಂಡರಾದ ನಾಗರಾಜ್, ಕರಿಯಪ, ಮುತ್ತುರಾಜ್, ತಮ್ಮೇಗೌಡ, ವೆಂಕಟೇಶ್, ಸುರೇಶ್, ಗುರುಸ್ವಾಮಿ, ಮಹಾದೇವ್, ಗಣೇಶ್, ಹರೀಶ್, ಶಿವಕುಮಾರ್, ನೀಲಪ್ಪ, ದೇವರಾಜ್, ಈ.ಆರ್.ರವಿ ಚಂದ್ರು ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಮತ್ತು ಭಕ್ತರು ಉಪಸ್ಥಿತರಿದ್ದರು.