ಬೆಂಗಳೂರು: ವೇತನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಳೆದ 7 ದಿನಗಳಿಂದ ಸಾರಿಗೆ ನೌಕರರು ಬೆಳಗಾವಿಯ ಸುವರ್ಣಸೌಧದ ಮುಂದೆ ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಐಪಿಎಸ್ ಮಾಜಿ ಅಧಿಕಾರಿ ಭಾಸ್ಕರ್ ರಾವ್ ಬೆಂಬಲ ನೀಡಿದ್ದು, ಡಿ.26ರಂದು 10 ಸಾವಿರಕ್ಕೂ ಹೆಚ್ಚು ಸಾರಿಗೆ ನೌಕರರು ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ.
ಸುಮಾರು ಮೂರು ವರ್ಷಗಳಿಂದ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ಸೇರಿದಂತೆ ಹಲವು ರೀತಿಯಲ್ಲಿ ಸರ್ಕಾರದ ಗಮನ ಸೆಳೆದರೂ ಸರ್ಕಾರವಾಗಲಿ, ಸಾರಿಗೆ ನಿಗಮದ ಆಡಳಿತ ಮಂಡಳಿಯಾಗಲಿ ನೌಕರರಿಗೆ ಸ್ಪಂದಿಸಿಲ್ಲ.
ಹೀಗಾಗಿ ಸಾರಿಗೆ ನೌಕರರು ಬೆಳಗಾವಿಯ ಸುವರ್ಣಸೌಧದ ಮುಂದೆ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಕಳೆದ ಇದೇ ಡಿ.19ರಿಂದ ಹಮ್ಮಿಕೊಂಡಿದ್ದು, ಈ ಉಪವಾಸ ಸತ್ಯಾಗ್ರಹಕ್ಕೆ ಐಪಿಎಸ್ ಮಾಜಿ ಅಧಿಕಾರಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ರಾಜ್ಯ ಗೌರವಾಧ್ಯಕ್ಷರು ಕೂಡ ಆಗಿರುವ ಐಪಿಎಸ್ ಮಾಜಿ ಅಧಿಕಾರಿ ಭಾಸ್ಕರ್ ರಾವ್ ಅವರು ನೌಕರರ ಬೇಡಿಕೆಯನ್ನು ಸರ್ಕಾರ ಪೂರೈಸಲೇ ಬೇಕು ಎಂದು ಆಗ್ರಹಿಸಿ ಬೆಂಬಲಿಸುತ್ತಿದ್ದಾರೆ.
ನಿನ್ನೆ ತಾನೆ ಸಾರಿಗೆ ನೌಕರರ ಸಮಾನ ಮನಸ್ಕರ ವೇದಿಕೆಯಿಂದ ನಡೆಯುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿತ್ತು. ಅದರಂತೆ ಭಾಗವಹಿಸುವುದು ಖಚಿತ ಎಂದು ನೌಕರರ ಸಂಘದ ಪದಾಧಿಕಾರಿಗಳು ಇಂದು ಸ್ಪಷ್ಟಪಡಿಸಿದ್ದು, ಈ ಹಿನ್ನೆಲೆಯಲ್ಲಿ ನೌಕರರ ಹೋರಾಟ ಇನ್ನೂ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಇತ್ತ ಸಾರಿಗೆ ಸಚಿವರು ಕಳೆದ ಐದು ದಿನದ ಹಿಂದೆ ಕೊಟ್ಟ ಭರವಸೆಯನ್ನೇ ಮರೆತು ಉಲ್ಟಾ ಹೇಳಿಕೆ ನೀಡಿದ್ದಾರೆ. ಈ ರೀತಿ ಸಚಿವರು ನೌಕರರು ಪರ ಎಂದು ಹೇಳಿಕೊಂಡೆ ಅವನ್ನು ಕಳೆದ ಮೂರು ವರ್ಷದಿಂದಲೂ ಯಾಮಾರಿಸಿಕೊಂಡು ಬರುತ್ತಲೇ ಇದ್ದಾರೆ. ಇದರಿಂದ ಬೇಸತ್ತಿರುವ ನೌಕರರು ಮಾಡು ಇಲ್ಲವೇ ಮಡಿ ಎಂಬ ಹೋರಾಟಕ್ಕೆ ಸಿದ್ಧವಾಗಿ ಈಗಾಗಲೇ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.
ಇನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ಡಿ.19ರಿಂದ ನಡೆಯುತ್ತಿರುವ ಚಳಿಗಾಲದ ಅಧಿವೇಶ ಇನ್ನೂ 5 ದಿನಗಳ ಕಾಲ ನಡೆಯಲಿದ್ದು ಅಷ್ಟರೊಳಗೆ ಸರ್ಕಾರ ಒಂದು ನಿರ್ಧಾರಕ್ಕೆ ಬರಬೇಕು ಇಲ್ಲದಿದ್ದರೆ ಅಧಿವೇಶನ ಮುಗಿದ ಬಳಿಕ ನೌಕರರು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲು ಈಗಗಾಲೇ ಸಜ್ಜಾಗುತ್ತಿರುವುದಾಗಿ ಸಮಾನ ಮನಸ್ಕರ ವೇದಿಕೆ ಸೇರಿದಂತೆ ಎಲ್ಲ ನೌಕರರು ತಿಳಿಸಿದ್ದಾರೆ.
ಇದಿಷ್ಟೇ ಅಲ್ಲದೆ ಸುಮಾರು 2 ವರ್ಷಗಳಿಂದ ಛಿದ್ರ ಛಿದ್ರವಾಗಿದ್ದ ನೌಕರರ ಮನಸ್ಸುಗಳು ಮತ್ತೆ ಒಂದುಗೂಡಿದ್ದು ತಮ್ಮ ವೈಯಕ್ತಿಕ ದ್ವೇಷವನ್ನು ಬದಿಗೊತ್ತಿ ಎಲ್ಲರೂ ಸಮಾನ ಮನಸ್ಕರ ವೇದಿಕೆ ಹಮ್ಮಿಕೊಂಡಿರುವ ಉಪವಾಸ ಸತ್ಯಾಗ್ರಹಕ್ಕೆ ವೈಯಕ್ತಿಕವಾಗಿ ಆಗಮಿಸುವ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದಾರೆ.
ಈ ನಡುವೆ ಸರ್ಕಾರ ಇನ್ನೂ ಹೀಗೆಯೆ ಮೊಂಡುತನ ಮುಂದುವರಿಸಿದರೆ ಎಲ್ಲ ನೌಕರರು ತಮ್ಮ ಕುಟುಂಬ ಸಮೇತ ಬೀದಿಗಿಳಿಯುವುದು ಬಹುತೇಕ ಖಚಿತವಾಗಿದೆ. ಆದ್ದರಿಂದ ಸರ್ಕಾರ ಈಗಲೇ ಎಚ್ಚೆತ್ತುಕೊಂಡು ನೌಕರರ ಬೇಡಿಕೆ ಈಡೇರಿಕೆಗೆ ಒತ್ತು ಕೊಡಬೇಕಿದೆ.