ಸೋಮವಾರಪೇಟೆ : ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸಾದ ಸಂಭ್ರಮದಲ್ಲಿ ಇರುವಾಗಲೇ ವಿದ್ಯಾರ್ಥಿನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಕೊಡಗಿನ ಸೋಮವಾರಪೇಟೆಯ ಸೂರ್ಲಬ್ಬಿ ಗ್ರಾಮದ 32 ವರ್ಷದ ಓಂಕಾರಾಪ್ಪ ಕೊಲೆ ಆರೋಪಿ. ಸೂರಬ್ಬಿ ಪ್ರೌಢಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಯು.ಎಸ್.ಮೀನಾ (16) ಹತ್ಯೆಗೀಡಾದ ವಿದ್ಯಾರ್ಥಿನಿ. ಆರೋಪಿ ಮಚ್ಚಿನಿಂದ ಆಕೆಯ ರುಂಡ ಮತ್ತು ಮುಂಡ ಬೇರ್ಪಡಿಸಿದ್ದು, ರುಂಡವನ್ನು ಹೊತ್ತೊಯ್ದಿದ್ದಾನೆ.
ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾದ ಕೆಲವೇ ಸಮಯದಲ್ಲಿ ಈ ಘಟನೆ ನಡೆದಿದೆ. ಸೂರ್ಲಬ್ಬಿ ಶಾಲೆಯ ಏಕೈಕ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಾಗಿದ್ದ ಮೀನಾ ಉತ್ತೀರ್ಣಳಾಗಿದ್ದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಪಾಸಾದ ಖುಷಿಯಲ್ಲಿ ಮೀನಾ ಮತ್ತು ಆಕೆಯ ಪೋಷಕರು ಇದ್ದರು. ಆದರೆ ಈ ಖುಷಿ ಹೆಚ್ಚು ಹೊತ್ತು ಇರಲಿಲ್ಲ.
ಬಾಲಕಿಗೂ 32 ವರ್ಷದ ಆರೋಪಿಗೂ ಮದುವೆ ಮಾಡಲು ಪೋಷಕರು ನಿರ್ಧರಿಸಿದ್ದರು. ಗುರುವಾರ ಇಬ್ಬರ ಮದುವೆ ನಿಶ್ಚಿತಾರ್ಥ ಕೂಡ ನಡೆಯಬೇಕಿತ್ತು. ಆದರೆ, ಈ ವಿಷಯತ ತಿಳಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ತಡೆದಿದ್ದರು. ಬಾಲ್ಯ ವಿವಾಹ ಮಾಡದಂತೆ ಪೋಷಕರ ಮನವೊಲಿಸಿದ್ದರು.
ಆದರೆ ಸಂಜೆ ವಿದ್ಯಾರ್ಥಿನಿಯ ಮನೆಗೆ ನುಗ್ಗಿದ ದುಷ್ಕರ್ಮಿ ಬಾಲಕಿಯನ್ನು ಪಾಲಕರ ಎದುರೆ ಅಪಹರಿಸಿ ಕಾಡಂಚಿನ ಪ್ರದೇಶದಲ್ಲಿ ಆಕೆಯನ್ನು ಕೊಂದು ದೇಹವನ್ನು ಅಲ್ಲಿಯೇ ಬಿಟ್ಟು ರುಂಡದೊಂದಿಗೆ ಪರಾರಿಯಾಗಿದ್ದಾನೆ.
ಶ್ವಾನದಳ, ವಿಧಿ ವಿಜ್ಞಾನ ತಂಡ ಭೇಟಿ: ಕೊಲೆ ನಡೆದ ಸ್ಥಳಕ್ಕೆ ಶ್ವಾನ ದಳ, ವಿಧಿ ವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೊಡಗು ಹೆಚ್ಚುವರಿ ಎಸ್ಪಿ ಸುಂದರ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮಚ್ಚು ಪತ್ತೆಯಾಗಿದ್ದು, ಪೊಲೀಸರು ಆರೋಪಿಗಾಗಿ ತಿವ್ರ ಶೋಧ ನಡೆಸುತ್ತಿದ್ದಾರೆ.