ಶಿಕ್ಷಣ-

SSLC  ಪರೀಕ್ಷೆಯಲ್ಲಿ ಜಿಲ್ಲೆಯ  ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ಕೈಜೋಡಿಸಿ

ಉತ್ತಮ ಫಲಿತಾಂಶಕ್ಕೆ ಶಿಕ್ಷಕರು ಶ್ರಮಿಸಿ ಎಂದ ಡಿಡಿಪಿಐ  ಕೃಷ್ಣಮೂರ್ತಿ   

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: 2019-20ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಲು ಜಿಲ್ಲೆಯ ಎಲ್ಲಾ ಶಿಕ್ಷಕರು ಶ್ರಮಿಸಿ ಕೈಜೋಡಿಸುವ ಮೂಲಕ ಉತ್ತಮ ಫಲಿತಾಂಶ ತರಬೇಕೆಂದು  ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ  ಕೃಷ್ಣಮೂರ್ತಿ   ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ  ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿಂದು ನಡೆದ “2020ರ ಮಾರ್ಚ್/ಏಪ್ರಿಲ್ ಮಾಹೆಯಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಯ  ಶಾಲಾ ಮುಖ್ಯ ಶಿಕ್ಷಕರ ಪೂರ್ವಭಾವಿ ಸಿದ್ಧತಾ ಸಭೆ” ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳು ಸೇರಿದಂತೆ ಎಲ್ಲಾ ಶಿಕ್ಷಕರು ಉತ್ತಮ ಫಲಿತಾಂಶಕ್ಕಾಗಿ ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರಲ್ಲದೆ, ಸರ್ಕಾರಿ, ಅನುದಾನಿತ ಶಾಲೆಗಳಿಗೆ ಅಗತ್ಯವಾಗಿರುವ ಸಂಪನ್ಮೂಲಗಳನ್ನು ಸರ್ಕಾರ ಒದಗಿಸಿದ್ದು, ಜಿಲ್ಲಾ ಪಂಚಾಯಿತಿ ವತಿಯಿಂದ ಅಗತ್ಯವಿರುವ ಸಹಕಾರವನ್ನು ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದರು. ಶಿಕ್ಷಕರು ಪೋಷಕರೊಂದಿಗೆ ಸಮಾಲೋಚನೆ ನಡೆಸಿ, ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳು ಕನಿಷ್ಠ ಉತ್ತೀರ್ಣರಾಗುವ ಮಟ್ಟಕ್ಕಾದರೂ ಸಿದ್ಧಗೊಳಿಸಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಹನುಮಂತರಾಯಪ್ಪ ಅವರು ಮಾತನಾಡಿ, ಪ್ರತಿ ಶಾಲೆಯ ಶಿಕ್ಷಕರು ಕೊರೋನಾ ವೈರಸ್ ಕುರಿತು ವಿದ್ಯಾರ್ಥಿಗಳಲ್ಲಿರುವ ಭಯ ಹೋಗಲಾಡಿಸುವುದರೊಂದಿಗೆ ಆತಂಕಗೊಳಗಾಗದೆ ಗುಣಮಟ್ಟದ ಆಹಾರ ಸೇವನೆ, ಸ್ವಚ್ಛತೆಯೊಂದಿಗೆ ಆರೋಗ್ಯ ವೃದ್ಧಿಸುವ ಅಭ್ಯಾಸಗಳನ್ನು ರೂಢಿಸಿಕೊಂಡು ಆತ್ಮಸ್ಥೈರ್ಯದಿಂದ ಪರೀಕ್ಷೆಯನ್ನು ಎದುರಿಸುವಂತೆ ಪ್ರೇರೆಪಿಸಿ ಎಂದು ಹೇಳಿದರು.

ಜಿಲ್ಲೆಯ ನಾಲ್ಕು ತಾಲೂಕಿನ ಶಾಲೆಗಳ ಮುಖ್ಯ ಶಿಕ್ಷಕರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply