ಬೆಂಗಳೂರು: ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆ (ಪಿಡಿಎಸ್) ಅಡಿ ನ್ಯಾಯಬೆಲೆ ಅಂಗಡಿಗೆ ಅನುಮತಿ ಪಡೆಯುವವರಿಗೆ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ಷರತ್ತು ವಿಧಿಸಲು ರಾಜ್ಯ ಸರ್ಕಾರಕ್ಕೆ ವಿಶೇಷ ಅಧಿಕಾರವಿದೆ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
2016ರಲ್ಲಿ ರಾಜ್ಯ ಸರ್ಕಾರ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆ ವ್ಯವಸ್ಥೆ (ನಿಯಂತ್ರಣ)ಕ್ಕೆ ಸಂಬಂಧಿಸಿದಂತೆ ಹೊರಡಿಸಿದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ ಈ ಆದೇಶ ಹೊರಡಿಸಿದೆ.
ನ್ಯಾಯಬೆಲೆ ಅಂಗಡಿ ಪರವಾನಗಿ ಪಡೆದ (ಡೀಲರ್) 65 ವರ್ಷದೊಳಗೆ ನಿಧನರಾದರೆ, ಅನುಕಂಪದ ಆಧಾರದ ಮೇಲೆ ಅವರ ನಿರುದ್ಯೋಗಿ ಪುತ್ರ ಅಥವಾ ಅವಿವಾಹಿತ ಮಗಳಿಗೆ ಲೈಸೆನ್ಸ್ ನೀಡುವಾಗ ಎಸ್‌ಎಸ್‌ಎಲ್‌ಸಿ ಉತ್ತೀರ್ಣವಾಗಿರಬೇಕು ಹಾಗೂ 18 ರಿಂದ 40 ವರ್ಷದ ಒಳಗಿನವರಾಗಿರಬೇಕು ಎಂದು ಷರತ್ತು ವಿಧಿಸಿ ಸರ್ಕಾರ ಹೊರಡಿಸಿದ ಆದೇಶವನ್ನು ನ್ಯಾಯಾಲಯ ಪುರಸ್ಕರಿಸಿದೆ.
ಹಿನ್ನೆಲೆ: ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣೆ (ನಿಯಂತ್ರಣ) ವ್ಯವಸ್ಥೆ ನಿಬಂಧನೆಗೆ ತಿದ್ದುಪಡಿ ಮಾಡಿದ ಸರ್ಕಾರ, ಅನುಮತಿ ಪಡೆದಿರುವ ಡೀಲರ್ 65 ವರ್ಷ ಮೀರುವುದರೊಳಗೆ ಮೃತಪಟ್ಟರೆ ಅವರ 65 ವರ್ಷ ಮೀರಿರದ ಪತ್ನಿ, 18 ವರ್ಷ ತುಂಬಿದ ನಿರುದ್ಯೋಗಿ ಪುತ್ರ ಅಥವಾ 18 ರಿಂದ 40 ವರ್ಷದೊಳಗಿನ ಅವಿವಾಹಿತ ಪುತ್ರಿ ಅಥವಾ 18 ವರ್ಷ ತುಂಬಿದ ವಿಧವೆ ಪುತ್ರಿಗೆ ಲೈಸೆನ್ಸ್ ನೀಡಬಹುದು.
ಈ ಸಂದರ್ಭದಲ್ಲಿ ಲೈಸೆನ್ಸ್ ಹಸ್ತಾಂತರ ಕೋರುವವರು, ಡೀಲರ್ ಸಾವನ್ನಪ್ಪಿದ ದಿನಕ್ಕೆ ಅನ್ವಯಿಸುವಂತೆ 10ನೇ ತರಗತಿ ಪಾಸಾಗಿರಬೇಕು ಎಂಬ ನಿಯಮ ಜಾರಿ ಮಾಡಿತ್ತು. ಈ ನಿಯಮವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಸರ್ಕಾರದ ತಿದ್ದುಪಡಿ ನಿಯಮವನ್ನು ಪುರಸ್ಕರಿಸಿರುವ ಹೈಕೋರ್ಟ್, 10ನೇ ತರಗತಿ ಪಾಸಾಗಿರಬೇಕು ಎಂಬುದು ಸರಿಯಾದ ಷರತ್ತಾಗಿದೆ. ಅಗತ್ಯ ವಸ್ತುಗಳನ್ನು ವಿತರಣೆ ಮಾಡುವ ವ್ಯಕ್ತಿಗೆ ಸಾಮಾನ್ಯ ಗಣಿತ, ಬ್ಯಾಂಕಿಂಗ್ ಮತ್ತು ಸಾರ್ವಜನಿಕ ಕಚೇರಿಗಳ ಜತೆ ವ್ಯವಹರಿಸುವುದು ತಿಳಿದಿರಬೇಕಾಗುತ್ತದೆ. ಹೀಗಾಗಿ, 10ನೇ ತರಗತಿ ಪಾಸಾಗಿರಬೇಕು ಎಂಬ ಷರತ್ತಿನಲ್ಲಿ ಯಾವುದೇ ಲೋಪವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.