RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಸರ್ಕಾರದ ಪ್ರಾಯೋಜಿತ ಅಮಾಯಕರ ಹತ್ಯಾಕಾಂಡ: ವಿಪಕ್ಷ ನಾಯಕ ಅಶೋಕ್ ಕಿಡಿ

ಬೆಂಗಳೂರು: ನಗರದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ಸರ್ಕಾರದ ಪ್ರಾಯೋಜಿತ ಅಮಾಯಕರ ಹತ್ಯಾಕಾಂಡ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತಕ್ಕೊಳಗಾಗಿ 11 ಮಂದಿ ಮೃತಪಟ್ಟು 50ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಕುರಿತು ಬಿಜೆಪಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕಪ್ಪು ನಮ್ಮದು ಸರಿ, ಆದರೆ ತಪ್ಪು ಯಾರದ್ದೆಂದು ಜನರು ಕೇಳುತ್ತಿದ್ದಾರೆ. ಕೂಗಳತೆ ಅಂತರದಲ್ಲೇ ಎರಡೆರಡು ಕಾರ್ಯಕ್ರಮಗಳು. ಈ ಕಾರ್ಯಕ್ರಮದ ಬಗ್ಗೆ ಐಪಿಎಲ್ ಚೇರ್ಮನ್‌ಗೊತ್ತೇ ಇಲ್ಲ ಎಂದು ಹೇಳಿದ್ದಾರೆ. ಸರ್ಕಾರ ಕೇಳಿದ್ದಕ್ಕೆ ಗ್ರೌಂಡ್ ಕೊಟ್ಟಿದ್ದೇನೆ ಎಂದು ಕೆಎಸ್‌ಸಿಎ ಹೇಳಿದೆ. ಇದರಲ್ಲಿ ಕೆಎಸ್‌ಸಿಎ ಅವರದ್ದು ತಪ್ಪಿಲ್ಲ. ಆರ್‌ಸಿಬಿಯವರು ಎರಡು ಕಿಮೀ ಮೆರವಣಿಗೆಗೆ ಕೇಳಿದ್ದರು. ಆದರೆ ಅವರನ್ನು ವಿಧಾನಸೌಧಕ್ಕೆ ಕರೆದುಕೊಂಡು ಬಂದಿದ್ದು ಯಾರು ಎಂದು ಪ್ರಶ್ನಿಸಿದರು.
ಇನ್ನು ಪಂದ್ಯ ಮುಗಿದ ಮೇಲೆ ನಮ್ಮ ಪೊಲೀಸರು ಬೆಳಗ್ಗೆ 3 ಗಂಟೆವರೆಗೂ ಕೆಲಸ ಮಾಡಿದ್ದಾರೆ. ಪಾಪ ನಮ್ಮ ಪೊಲೀಸರಿಗೆ ರಾತ್ರಿ ಎಲ್ಲ ನಿದ್ದೆನೇ ಇರಲಿಲ್ಲ. ಆದರೆ ನಮ್ಮ ಸರ್ಕಾರಕ್ಕೆ ಕಾಮನ್ ಸೆನ್ಸ್ ಇಲ್ಲ. ಅದೇ ಪೊಲೀಸರನ್ನು ನಿಯೋಜನೆ ಮಾಡಿದರೆ ಅವರು ಹೇಗೆ ಕೆಲಸ ಮಾಡಲು ಆಗುತ್ತದೆ ಎಂದು ಪ್ರಶ್ನಿಸಿದರು.
ಅಲ್ಲದೆ ಪೊಲೀಸರು ಈ ಕಾರ್ಯಕ್ರಮಕ್ಕೆ ನಿರಾಕರಣೆ ಮಾಡಿದ್ದರು. ಆದರೂ ಬಲತ್ಕಾರದಿಂದ ಸರ್ಕಾರದಲ್ಲಿರುವುದು ನಾನಾ ನೀನಾ ಎಂದು ಪ್ರಶ್ನೆ ಕೇಳಿ, ವಿಧಾನ ಸೌಧದ ಮುಂದೆ ಡ್ರೋನ್ ಎಲ್ಲ ಬಳಕೆ ಮಾಡಿದ್ದಾರೆ. ಹೈಕೋರ್ಟ್ ನಿರ್ಬಂಧಿತ ಸ್ಥಳ, ಎಂತಹ ಮುಟ್ಟಾಳ ಕೆಲಸ ಮಾಡಿದೆ. ಇವತ್ತು ಕೋರ್ಟ್ ಕೂಡ ಸುಮೊಟೋ ಕೇಸ್ ದಾಖಲಿಸಿಕೊಂಡಿದೆ.
ಇನ್ನು ಇಷ್ಟಾದರೂ ಕೂಡ ಮುಖ್ಯಮಂತ್ರಿಗಳು, ಇಷ್ಟು ಜನ ಸೇರುತ್ತಾರೆ ಎಂದು ನಾವು ಅಂದಾಜಿಸಿಲ್ಲ ಅಂದಿದ್ದಾರೆ. ಎಲ್ಲೆಲ್ಲಿ ಎಷ್ಟೆಷ್ಟು ಜನರು ಸೇರುತ್ತಾರೆ ಎಂದು ಸರ್ಕಾರಕ್ಕೆ ಸಾಮಾನ್ಯ ಜ್ಞಾನವೂ ಇಲ್ಲವೇ ಎಂದು ಅಶೋಕ್ ಕಿಡಿಕಾರಿದರು.

ಒಂದು ಕಾರ್ಯಕ್ರಮ ಆಯೋಜಿಸುವ ಮುನ್ನ ಅದರ ಬಗ್ಗೆ ಪೂರ್ವಪರ ಯೋಚನೆ ಮಾಡುವುದನ್ನು ಬಿಟ್ಟು ಈ ರೀತಿ ಬೇಕಾಬಿಟ್ಟಿಯಾಗಿ ಸರ್ಕಾರ ನಡೆದುಕೊಂಡರ ಪರಿಣಾಮ ಇಂದು ಭವಿಷ್ಯದ 11 ಪ್ರಜೆಗಳನ್ನು ಕಳೆದುಕೊಂಡಿದ್ದೇವೆ ಎಂದರು.
Related








