ಬೆಂಗಳೂರು: ಕಬ್ಬಿನ ಎಫ್ಆರ್ಪಿ ದರ 2025-2026ನೇ ಸಾಲಿನಲ್ಲಿ ಟನ್‌ಗೆ ಕೇವಲ ₹150 ಏರಿಕೆ ಮಾಡಿರುವುದು ಅವೈಜ್ಞಾನಿಕವಾಗಿದ್ದು ಪುನರ್ ಪರಿಶೀಲನೆ ಮಾಡಿಸಿ ಸಿಎಸಿಪಿ ವರದಿಯಂತೆ ಟನ್ ಕಬ್ಬಿಗೆ ₹4500 ಬೆಲೆ ನಿಗದಿ ಪಡಿಸಬೇಕು ಎಂದು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರನ್ನು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ನೇತೃತ್ವದಲ್ಲಿ ಬುಧವಾರ ಬೆಂಗಳೂರಿನಲ್ಲಿ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರನ್ನು ಬೇಟಿ ಮಾಡಿ ಕಬ್ಬು ಬೆಳೆಗಾರ ರೈತರ ಸಮಸ್ಯೆಗಳನ್ನು ಚರ್ಚಿಸಿ ಒತ್ತಾಯ ಪತ್ರ ಸಲ್ಲಿಸಿದರು.
ಸಕ್ಕರೆ ಕಾರ್ಖಾನೆಗಳಿಂದ ಕಳೆದ ವರ್ಷದ ಉಪ ಉತ್ಪನ್ನಗಳ ಲಾಭ ಹಂಚಿಕೆ ಮಾಡಿಸಬೇಕು. ಕಳೆದ ವರ್ಷ ಸರ್ಕಾರ ಹೆಚ್ಚುವರಿಯಾಗಿ ಟನ್‌ಗೆ ₹150 ಬೆಲೆ ನಿಗದಿಪಡಿಸಿದ್ದು, ಕಾರ್ಖಾನೆಗಳು ಇನ್ನು ಕೊಟ್ಟಿಲ್ಲ ₹950 ಕೋಟಿ ಹಣ ಬಾಕಿ ಇದ್ದು ತಕ್ಷಣವೇ ಕೊಡಿಸಬೇಕು ಎಂದು ಆಗ್ರಹಿಸಿದರು.
ಇನ್ನು ಕಬ್ಬಿನ ಎಫ್ಆರ್ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು. ಸಕ್ಕರೆ ಕಾರ್ಖಾನೆಗಳಿಂದ ಸಕ್ಕರೆ ಮೋಸ ತಪ್ಪಿಸಲು ಇಳುವರಿ ಮಿತಿ ಕನಿಷ್ಠ 9ಕೆ ಜಾರಿ ಆಗಬೇಕು. ಬೆಂಕಿ ಬಿದ್ದು ಸುಟ್ಟ ಕಬ್ಬಿಗೆ ಕಾರ್ಖಾನೆಗಳು ಕಬ್ಬಿನ ಹಣದಲ್ಲಿ ಶೇ.25 ರಷ್ಟು ಹಣ ಕಡಿತ ಮಾಡುವುದನ್ನು ತಪ್ಪಿಸಬೇಕು ಎಂದು ಒತ್ಥಾಯಿಸಿದರು.
ಕಬ್ಬಿನ ತೂಕದಲ್ಲಿ ಮೋಸ ತಪ್ಪಿಸಲು ಕಾರ್ಖಾನೆಗಳ ಮುಂದೆ ತೂಕದ ಯಂತ್ರ ಸ್ಥಾಪಿಸಬೇಕು. ಕಬ್ಬು ಕಟಾವು ಯಂತ್ರದ ಮೂಲಕ ಕಟಾವು ಮಾಡುವಾಗ ಶೇ.8 ರಷ್ಟು ಕಬ್ಬು ವೇಸ್ಟೇಜ್ ಎಂದು ಕಡಿತ ಮಾಡುವುದನ್ನು ತಪ್ಪಿಸಬೇಕು ಹಾಗೂ ಕಾನೂನು ಬಾಹಿರವಾಗಿ ಕಬ್ಬು ಕಡಿತ ಮಾಡಿದ ಕಾರ್ಖಾನೆಗಳಿಗೆ ದಂಡ ಹಾಕಿ ಕಡಿತ ಮಾಡಿದ ಹಣ ರೈತರಿಗೆ ವಾಪಸ್ ಕೊಡಿಸಬೇಕು.
ಈ ವೇಳೆ ಮೈಸೂರು – ಚಾಮರಾಜ ನಗರ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ದೊಡ್ಡ ಕಾಟೂರು ನಾಗೇಶ್, ಕೋಟೆಪುರ ಜಗದೀಶ್, ಬಳ್ಳಾರಿ ಪರಮೇಶ್ ಇದ್ದರು.

Related

 










