NEWSನಮ್ಮಜಿಲ್ಲೆನಮ್ಮರಾಜ್ಯ

ರಾಜ್ಯದ 43ನೇ ಡಿಜಿ-ಐಜಿಪಿಯಾಗಿ ಕನ್ನಡಿ ಡಾ. ಎಂ.ಎ.ಸಲೀಂ ಅಧಿಕಾರ ಸ್ವೀಕಾರ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಇಂದು ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ, ಅವರಿಂದ ತೆರವಾದ ಡಿಜಿ-ಐಜಿಪಿ ಸ್ಥಾನಕ್ಕೆ ಸಿಐಡಿ ಡಿಜಿ ಡಾ. ಎಂ.ಎ.ಸಲೀಂ ಅವರು ಹಂಗಾಮಿ ಡಿಜಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದರು.

ಈ ಮೂಲಕ ರಾಜ್ಯದ 43ನೇ ಡಿಜಿ-ಐಜಿಪಿಯಾಗಿ ನೇಮಕಗೊಂಡವರಾಗಿದ್ದಾರೆ. ಡಿಜಿಪಿ ಅಲೋಕ್ ಮೋಹನ್ ಅವರ ಸೇವಾವಧಿ ಇಂದಿಗೆ ಅಂತ್ಯವಾಗಿದೆ. ಈ ಸ್ಥಾನಕ್ಕೆ ಅಗ್ನಿಶಾಮಕ ಇಲಾಖೆಯ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್ ಹಾಗೂ ಸಲೀಂ ಅವರ ಹೆಸರುಗಳು ಮುಂಚೂಣಿಯಲ್ಲಿದ್ದವು. ಈ ಬಗ್ಗೆ ಸರ್ಕಾರದಿಂದ ಇಂದು ಅಧಿಕೃತ ಆದೇಶ ಹೊರಬಿದ್ದ ಬೆನ್ನಲ್ಲೇ ಸಾಯಂಕಾಲ ಅಧಿಕಾರ ಸ್ವೀಕರಿದರು.

ಅಗ್ನಿಶಾಮಕ ಇಲಾಖೆಯ ಡಿಜಿಪಿಯಾಗಿರುವ ಬಿಹಾರ ಮೂಲದ ಕರ್ನಾಟಕ ಕೇಡರ್ ಆಗಿರುವ ಪ್ರಶಾಂತ್ ಕುಮಾರ್ ಠಾಕೂರ್ ಅವರ ಹೆಸರೂ ಕೂಡ ಡಿಜಿಪಿ ಹುದ್ದೆಗೆ ಮುಂಚೂಣಿಯಲ್ಲಿತ್ತು. ಅಲ್ಲದೆ, ಅವರೂ ಕೂಡ ಸೇವಾ ಜೇಷ್ಠತೆ ಹೊಂದಿದ್ದಾರೆ. ಅಲ್ಲದೆ, 1993ರ ಬ್ಯಾಚ್‌ನ ಮತ್ತೊಬ್ಬ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಅವರ ಹೆಸರೂ ಕೂಡ ಕೇಳಿಬಂದಿತ್ತು. ಆದರೆ, ರನ್ಯಾ ರಾವ್ ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ.

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಸಲೀಂ ಅವರು, ಮೊದಲನೆಯದಾಗಿ ನಾನು‌ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ಅಲೋಕ್ ಮೋಹನ್ ಸರ್​​ಗೆ ಕೂಡ ಧನ್ಯವಾದ ಹೇಳುವೆ. ಅವರ ಉತ್ತಮ ಕೆಲಸಗಳನ್ನು ಮುಂದುವರಿಸುತ್ತೇನೆ. ಪೊಲೀಸ್‌ ಇಲಾಖೆಯಲ್ಲಿ ಪಾರದರ್ಶಕತೆ ಕಾಪಾಡಬೇಕು. ನಾವು ಆರೋಪಿಗಳಿಗಿಂತ ದೂರುದಾರರ ಪರ ಹೆಚ್ಚಿನ ಗಮನ ಕೊಡಬೇಕು. ಈ ಹಿಂದೆ ಮಕ್ಕಳ, ಮಹಿಳಾ ಸಹಾಯ ವಾಣಿ ಕಾರ್ಯಕ್ರಮಗಳು ಮತ್ತೆ ಮುಂದುವರಿಯಬೇಕು ಎಂದರು.

ಪೊಲೀಸರ ಮೇಲೆ ನಂಬಿಕೆ ದ್ವಿಗುಣಗೊಳಿಸಬೇಕು. ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಡಲಾಗುವುದು. ರಾಷ್ಟ್ರದ್ರೋಹ, ಸಮಾಜಘಾತುಕ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕಾನೂನು ಸುವ್ಯವಸ್ಥೆ ಕಾಪಾಡುವ ಜತೆಗೆ, ಸೈಬರ್ ಕ್ರೈಂ ನಿಯಂತ್ರಿಸಲಾಗುವುದು. ಈ ಬಗ್ಗೆ 1,200 ಜುಡಿಷಿಯಲ್ ಅಧಿಕಾರಿ​ಗಳಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.

‘ರಾಜ್ಯದಲ್ಲಿ ಡ್ರಗ್ಸ್, ಮಟ್ಕಾ, ಗ್ಯಾಬ್ಲಿಂಗ್ ಅನ್ನು ಶೇ.100ರಷ್ಟು ಮಟ್ಟ ಹಾಕಬೇಕಿದೆ. ಟ್ರಾಫಿಕ್ ನಿರ್ವಹಣೆ, ರಸ್ತೆ ಸುರಕ್ಷತೆ, ನಗರ ಪ್ರದೇಶ ಆದ್ಯತೆ ನೀಡಲಾಗುವುದು. ಮಾನವ ಹಕ್ಕುಗಳು, ಪೊಲೀಸರ ಸಿಬ್ಬಂದಿ ರಕ್ಷಣೆ, ಕಾರ್ಯ ನಿರ್ವಹಣೆ ಚುರುಕುಗೊಳಿಸಿ, ಪೋಲಿಸರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಬೇಕಿದೆ ಎಂದರು.

ಡಾ. ಎಂ.ಎ. ಸಲೀಂ ಅವರ ಪರಿಚಯ: 1993ರಲ್ಲಿ ಪೊಲೀಸ್ ಸೇವಾ (ಐಪಿಎಸ್) ವೃತ್ತಿಜೀವನ ಆರಂಭಿಸಿದರು. ಬಹುಮುಖ ಸಾಮರ್ಥ್ಯ ಮತ್ತು ಉತ್ಕೃಷ್ಟ ಅನುಭವದೊಂದಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ 26 ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಉಡುಪಿ ಮತ್ತು ಹಾಸನ ಜಿಲ್ಲೆಗಳಲ್ಲಿ ಪೊಲೀಸ್ ಅಧೀಕ್ಷಕರಾಗಿ, ಮೈಸೂರು ನಗರದ ಪೊಲೀಸ್ ಆಯುಕ್ತರಾಗಿ, ಬೆಂಗಳೂರು ನಗರದ ವಿಶೇಷ ಪೊಲೀಸ್ ಆಯುಕ್ತರಾಗಿ, ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಘಟಕದ, ಕರ್ನಾಟಕ ರಾಜ್ಯ ಪೊಲೀಸ್‌ ಅಪರಾಧ ವಿಭಾಗ ಮತ್ತು ಆಡಳಿತ ವಿಭಾಗಗಳಿಗೆ ಮುಖ್ಯಸ್ಥರಾಗಿಯೂ ಸಹ ಸೇವೆ ಸಲ್ಲಿಸಿರುವ ಅವರು ಪ್ರಸ್ತುತ ಸಿಐಡಿ ಪೊಲೀಸ್ ಮಹಾನಿರ್ದೇಶಕರಾಗಿದ್ದರು. ಸಲೀಂ ಅವರು ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಹಾಗೂ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ. ಗರುಡ ಪ್ಯಾಟ್ರೋಲ್ ಪಡೆ ಆರಂಭ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವಿಶೇಷ ಕಾರ್ಯಪಡೆಗಳ ರಚನೆ ಹಾಗೂ ಸಂಚಾರ ನಿಯಮಗಳ ಜಾರಿಗೆ ತಂದಿರುವ ಹೆಗ್ಗಳಿಕೆ ಇವರದ್ದಾಗಿದೆ.

ಹಲವು ವಿಶೇಷ ತನಿಖಾ ತಂಡಗಳ ನೇತೃತ್ವ: ಟ್ರಾಫಿಕ್ ನಿರ್ವಹಣೆಯಷ್ಟೇ ಅಲ್ಲದೇ, ಕ್ರಿಮಿನಲ್ ಪ್ರಕರಣಗಳ ತನಿಖೆಯಲ್ಲೂ ಸಲೀಂ ಅವರು ಹೆಸರುವಾಸಿಯಾಗಿದ್ದರು. ಹಲವಾರು ಮಹತ್ವದ, ಸೂಕ್ಷ್ಮ ಮತ್ತು ಕ್ಲಿಷ್ಟಕರ ಕ್ರಿಮಿನಲ್ ಪ್ರಕರಣಗಳ ತನಿಖೆಗೆ ರಚಿಸಲಾದ ವಿಶೇಷ ತನಿಖಾ ತಂಡಗಳನ್ನು ಇವರು ಯಶಸ್ವಿಯಾಗಿ ಮುನ್ನಡೆಸಿದ್ದಾರೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣ, ಬಹುಕೋಟಿ ಕ್ರಿಪ್ಟೋಕರೆನ್ಸಿ ಹ್ಯಾಕಿಂಗ್ ಪ್ರಕರಣ, ಹಾಸನದಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ, ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಕೋಟ್ಯಂತರ ರೂ. ದುರುಪಯೋಗ ಪ್ರಕರಣ, ಪಿಎಸ್​​​ಐ ನೇಮಕಾತಿ ಹಗರಣ ಹಾಗೂ ಶಾಸಕರೊಬ್ಬರ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಬೆದರಿಕೆ ಪ್ರಕರಣಗಳ ವಿಶೇಷ ತನಿಖಾ ತಂಡಗಳ ನೇತೃತ್ವವನ್ನು ವಹಿಸಿದ್ದರು.

ಈ ಎಲ್ಲದ ಜತೆಗೆ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ‘ನಗರ ಪ್ರದೇಶಗಳಲ್ಲಿ ಸಂಚಾರ ನಿರ್ವಹಣೆ’ ಎಂಬ ಗ್ರಂಥವನ್ನೂ ರಚಿಸಿದ್ದಾರೆ. ವಾಣಿಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಪೊಲೀಸ್ ಮ್ಯಾನೇಜ್ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಂಚಾರ ನಿರ್ವಹಣೆಯಲ್ಲಿ ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ.

ಹಲವು ಪ್ರಶಸ್ತಿಗಳು: ಸಲೀಂ ಅವರ ಉನ್ನತ ಸೇವೆ, ಸಾಧನೆಗಳನ್ನು ಗುರುತಿಸಿ ಅವರಿಗೆ 2017ರಲ್ಲಿ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪೊಲೀಸ್ ಪದಕ, 2009ರಲ್ಲಿ ರಾಷ್ಟ್ರಪತಿಗಳ ಶ್ಲಾಘನೀಯ ಪೊಲೀಸ್ ಪದಕ, ರಾಷ್ಟ್ರೀಯ ಇ-ಗವರ್ನೆಂಸ್ ಪ್ರಶಸ್ತಿ, 2021ರಲ್ಲಿ ಕಮಾಂಡೇಷನ್ ಡಿಸ್ಕ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿವೆ.

Megha
the authorMegha

Leave a Reply

error: Content is protected !!