ಬೆಂಗಳೂರು: ದೇಶದ ರೈತರ ಹಿತರಕ್ಷಣೆಗಾಗಿ ಹೋರಾಟ ಮಾಡುತ್ತಿರುವ ಪಂಜಾಬ್, ಹರಿಯಾಣ ರೈತರ ಮೇಲೆ ಪೊಲೀಸ್ ಗೋಲಿಬಾರ್ ಮಾಡಿ ರೈತ ಶುಭಕರಣ್ ಸಿಂಗ್ ಪ್ರಾಣ ತೆಗೆದ ಕೇಂದ್ರ ಸರ್ಕಾರದ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ರಾಜ್ಯದ್ಯಂತ ರೈತರ ಆಕ್ರೋಶ ದಿನ, ಪಂಜಿನ ಪ್ರತಿಭಟನಾ ಮೆರವಣಿಗೆ ನಡೆಸಿತು.
ಅದರಂತೆ ಇಂದು ಬೆಂಗಳೂರಿನಲ್ಲಿ ರೈತರತ್ನ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ರೈತರ ಆಕ್ರೋಶ ದಿನ, ಪಂಜಿನ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಕೇಂದ್ರ ಸರ್ಕಾರ ರೈತ ಹೋರಾಟವನ್ನು ಹತ್ತಿಕ್ಕುವ ಬದಲು, ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಗಾಗಿ, ರೈತರ ಸಂಪೂರ್ಣ ಕೃಷಿ ಸಾಲ ಮನ್ನಕ್ಕಾಗಿ, ಸಂಕಷ್ಟ ಕಾಲದಲ್ಲೂ ಬ್ಯಾಂಕುಗಳು ರೈತರಿಗೆ ಸಾಲ ವಸುಲಿಗಾಗಿ ನೋಟಿಸ್ ನೀಡುತ್ತಿವೆ, ಇದು ನಿಲ್ಲಬೇಕು. 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಮಾರ್ಚ್ 12 ರ ಸಂಜೆ 6 ಗಂಟೆಯಲ್ಲಿ ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿ ರೈತರು ಬೃಹತ್ ಪಂಜಿನ ಪ್ರತಿಭಟನೆ ನಡೆಸಿದರು. ಅದರಂತೆ ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ಚಾಮರಾಜನಗರ ಜಿಲ್ಲೆಗಳ ರೈತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ವಿ.ಆರ್. ನಾರಾಯಣರೆಡ್ಡಿ , ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಕನ್ನಡ ಚಳವಳಿಯ ಗುರುದೇವ್ ನಾರಾಯಣ್ ಕುಮಾರ್, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ರಾಜೇಶ್ ಜಿಲ್ಲಾ ಮಹಿಳಾ ಅಧ್ಯಕ್ಷೆ ಕಮಲಮ್ಮ, ಬರಡನಪುರ ನಾಗರಾಜ್, ಗಜೇಂದ್ರ ಮತ್ತಿತರರು ಇದ್ದರು.