ಪಾಂಡವಪುರ: ಅಧಿಕಾರಿಗಳ ಮೇಲೆ ಒತ್ತಡ ತಂದು ಕಾಮಗಾರಿಗಳನ್ನು ಪ್ಯಾಕೇಜ್‌ಗಳನ್ನಾಗಿ ಪರಿವರ್ತಿಸಿ ತಮ್ಮದೇ ಸಂಸ್ಥೆಯಾದ ಎಸ್‌ಟಿಜಿಗೆ ಅನುಕೂಲ ಮಾಡಿಕೊಡುವ ಮೂಲಕ ಸಣ್ಣ ಗುತ್ತಿಗೆದಾರರ ಒಕ್ಕಲೆಬ್ಬಿಸುತ್ತಿದ್ದಾರೆ ಶಾಸಕ ಸಿ.ಎಸ್.ಪುಟ್ಟರಾಜು ಎಂದು ಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಎನ್.ರವೀಂದ್ರ ಆರೋಪಿಸಿದರು.
ಹೇಮಾವತಿ, ಕಾವೇರಿ ನೀರಾವರಿ ನಿಗಮ ಸೇರಿದಂತೆ ಇಂಜಿನಿಯರಿಂಗ್ ವಿಭಾಗದ ಇಲಾಖೆಗಳಲ್ಲಿ ಸಣ್ಣ ಪುಟ್ಟ ಗುತ್ತಿಗೆದಾರರಿಗೆ ಕೆಲಸ ಸಿಗುತ್ತಿಲ್ಲ. ಇದರಿಂದ ಎರಡು, ಮೂರು ಮತ್ತು ನಾಲ್ಕನೇ ದರ್ಜೆ ಗುತ್ತಿಗೆದಾರರು ಕಂಗಾಲಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕರ ವಿರುದ್ಧ ಕಿಡಿಕಾರಿದರು.
ಶಾಸಕರು ಈ ಮೂಲಕ ಸಣ್ಣಪುಟ್ಟ ಗುತ್ತಿಗೆದಾರರ ಕತ್ತು ಹಿಸಕುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಡಿ.5 ರಂದು ಇಂಜಿನಿಯರಿಂಗ್ ವಿಭಾಗದ ಕಚೇರಿ ಗಳನ್ನು ಮುತ್ತಿಗೆ ಹಾಕಿ ಅಧಿಕಾರಿಗಳನ್ನು ಪ್ರಶ್ನಿಸಲಾಗುವುದು. ಅಧಿಕಾರಿಗಳು ಯಾವ ಮಾನದಂಡದ ಮೇಲೆ ಕಾಮಗಾರಿಗಳನ್ನು ಕ್ರೂಡೀಕರಿಸಿ ಪ್ಯಾಕೇಜ್ ಮಾಡುತ್ತಿದ್ದಾರೆ ಎಂಬುದಕ್ಕೆ ಅವರಿಂದ ಉತ್ತರ ಪಡೆಯಲಾಗುವುದು ಎಂದರು.
ಕೆಆರ್‌ಐಡಿಎಲ್ ಅಧಿಕಾರಿಗಳು ನಿಗಮದ ವತಿಯಿಂದ ನಿರ್ವಹಿಸುವ ಕಾಮಗಾರಿಗಳನ್ನು ಕಳಪೆ ಮಾಡಿ ಸಿಮೆಂಟ್ ಮತ್ತು ಕಬ್ಬಿಣಗಳನ್ನು ತೆರಿಗೆ ರಹಿತವಾಗಿ ಖಾಸಗಿಯವರಿಗೆ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ. ಜತೆಗೆ ಅಂಬೇಡ್ಕರ್ ಭವನಗಳ ನಿರ್ಮಾಣ ಕಾಮಗಾರಿ ವಿಳಂಬದ ಬಗ್ಗೆ ಮಾಹಿತಿ ನೀಡುವಂತೆ ಪ್ರಶ್ನಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ದೇವೇಗೌಡನಕೊಪ್ಪಲು ದೇವೇಗೌಡ, ಹೊಸಕೋಟೆ ವಿಜಯಕುಮಾರ್ ಮತ್ತಿತರರು ಇದ್ದರು.