ರೇಣುಕಾಸ್ವಾಮಿ ಕೊಲೆ ಪ್ರಕರಣ ಜಾಮೀನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್: ಮತ್ತೆ ಜೈಲಿಗೆ ನಟ ದರ್ಶನ್ ಅಂಡ್ ಟೀಂ


ನ್ಯೂಡೆಲ್ಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಜಾಮೀನು ರದ್ದುಗೊಳಿಸುವಂತೆ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇಂದು ಗುರುವಾರ ತೀರ್ಪು ನೀಡಿದ್ದು, ಕೂಡಲೇ ಎಲ್ಲರೂ ಸರೆಂಡರ್ ಆಗಬೇಕು. ಒಂದು ವೇಳೆ ಶರಣಾಗದಿದ್ದರೇ ಕೂಡಲೇ ವಶಕ್ಕೆ ಪಡೆಯುವಂತೆ ಪೊಲೀಸರಿಗೆ ಕೋರ್ಟ್ ಸೂಚಿಸಿದೆ. ಈ ತೀರ್ಪಿನ ಪ್ರತಿಯನ್ನು ಎಲ್ಲ ಹೈಕೋರ್ಟ್‌ಗಳು ಮತ್ತು ರಾಜ್ಯ ಸರ್ಕಾರಗಳಿಗೆ ನೀಡುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ.
ಇನ್ನು ಆರೋಪಿ ಎಷ್ಟೇ ದೊಡ್ಡವನಾಗಿದ್ದರೂ, ಅವನು ಅಥವಾ ಅವಳು ಕಾನೂನಿಗಿಂತ ಮೇಲಲ್ಲ ಎಂಬ ಸಂದೇಶವನ್ನು ಇದು ನೀಡುತ್ತದೆ. ಯಾವುದೇ ಮಟ್ಟದಲ್ಲಿ ನ್ಯಾಯ ವಿತರಣಾ ವ್ಯವಸ್ಥೆಯು ಯಾವುದೇ ಬೆಲೆ ತೆತ್ತಾದರೂ ಕಾನೂನಿನ ನಿಯಮವನ್ನು ಕಾಪಾಡಿಕೊಳ್ಳಬೇಕು ಎಂಬ ಬಲವಾದ ಸಂದೇಶವನ್ನು ಇದು ಒಳಗೊಂಡಿದೆ.
ಯಾವುದೇ ವ್ಯಕ್ತಿ ಕಾನೂನಿಗಿಂತ ಮೇಲಲ್ಲ ಅಥವಾ ಅದಕ್ಕಿಂತ ಕೆಳಗಿಲ್ಲ. ನಾವು ಅದನ್ನು ಪಾಲಿಸುವಾಗ ಯಾರ ಅನುಮತಿಯನ್ನೂ ಕೇಳುವುದಿಲ್ಲ. ಎಲ್ಲ ಸಮಯದಲ್ಲೂ ಕಾನೂನಿನ ನಿಯಮವನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ನ್ಯಾಯಮೂರ್ತಿ ಜೆ.ಬಿ.ಪರ್ದಿವಾಲಾ ಆದೇಶದಲ್ಲಿ ತಿಳಿಸಿದ್ದಾರೆ.
ಇನ್ನು ಜಾಮೀನು ಮಂಜೂರು ಮತ್ತು ರದ್ದತಿ ಎರಡನ್ನೂ ನಾವು ಪರಿಗಣಿಸಿದ್ದೇವೆ. ಹೈಕೋರ್ಟ್ ಆದೇಶವು ಅಧಿಕಾರದ ಯಾಂತ್ರಿಕ ವ್ಯಾಯಾಮವನ್ನು ಪ್ರತಿಬಿಂಬಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಜಾಮೀನು ಮಂಜೂರು ವಿಚಾರಣೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದು. ಗಂಭೀರ ದೌರ್ಬಲ್ಯಗಳಿಂದ ಬಳಲುತ್ತಿದೆ.ಬದಲಿಗೆ ಇದು ಯಾಂತ್ರಿಕ ಆಯಾಮವನ್ನು ಪ್ರತಿಬಿಂಬಿಸುತ್ತದೆ.
ಮೇಲಾಗಿ, ಹೈಕೋರ್ಟ್ ವಿಚಾರಣೆಯ ಪೂರ್ವ ಹಂತದಲ್ಲಿ ಪರೀಕ್ಷೆಯನ್ನು ಕೈಗೊಂಡಿತು. ವಿಚಾರಣಾ ನ್ಯಾಯಾಲಯ ಮಾತ್ರ ಸೂಕ್ತ ವೇದಿಕೆಯಾಗಿ ಪರಿಗಣಿಸದೆ ಜಾಮೀನು ನೀಡುವುದು. ಸುಸ್ಥಾಪಿತ ಆರೋಪಗಳು, ಪೂರ್ವಭಾವಿ ಸಾಕ್ಷ್ಯಗಳೊಂದಿಗೆ ಸೇರಿಕೊಂಡು ಜಾಮೀನು ರದ್ದತಿಯನ್ನು ಬಲಪಡಿಸುತ್ತವೆ. ನಾವು ಅಸಾಧಾರಣ ನ್ಯಾಯವ್ಯಾಪ್ತಿಯನ್ನು ಚಲಾಯಿಸಲು ತೃಪ್ತರಾಗಿದ್ದೇವೆ ಎಂದು ನ್ಯಾ. ಮಹದೇವನ್ ತೀರ್ಪಿನಲ್ಲಿ ಹೇಳಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ವರ್ಷ ಕರ್ನಾಟಕ ಹೈಕೋರ್ಟ್ ಆರೋಪಿ ದರ್ಶನ್ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆಯನ್ನು ಜು.24 ರಂದು ಸುಪ್ರೀಂನ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಆರ್.ಮಹದೇವನ್ ಅವರಿದ್ದ ದ್ವಿಸದಸ್ಯೆ ನ್ಯಾಯಪೀಠ ವಿಚಾರಣೆ ನಡೆಸಿತ್ತು. ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು.
ಜೈಲಾಧಿಕಾರಿಗಳಿಗೆ ಸುಪ್ರೀಂ ಎಚ್ಚರಿಕೆ: ರೇಣುಕಾಸ್ವಾಮಿ ಕೊಲೆ ಪ್ರಕರಣದ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಎಲ್ಲ ಆರೋಪಿಗಳ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ್ದು, ಈ ಹಿನ್ನೆಲೆ ದರ್ಶನ್‌ಗೆ ಜೈಲಿನಲ್ಲಿ ವಿಐಪಿ ಟ್ರೀಟ್‌ಮೆಂಟ್ ಕೊಟ್ಟರೆ ಹುಷಾರ್ ಎಂದು ಜೈಲಾಧಿಕಾರಿಗಳಿಗೆ ಸುಪ್ರೀಂ ಎಚ್ಚರಿಕೆ ಕೊಟ್ಟಿದೆ.
ಆರೋಪಿಗಳಿಗೆ 5 ಸ್ಟಾರ್ ಟ್ರೀಟ್‌ಮೆಂಟ್ ನೀಡಲಾಗುತ್ತಿದೆ ಎಂದು ನಮಗೆ ತಿಳಿದ ದಿನ, ಮೊದಲ ಹೆಜ್ಜೆಯೇ ಸೂಪರಿಂಟೆಂಡೆಂಟ್ ಮತ್ತು ಇತರ ಎಲ್ಲ ಅಧಿಕಾರಿಗಳನ್ನು ಅಮಾನತುಗೊಳಿಸುವುದು. ರಾಜ್ಯ ಸರ್ಕಾರ ಯಾರಿಗಾದರೂ ವಿಐಪಿ ಟ್ರೀಟ್‌ಮೆಂಟ್ ನೀಡುತ್ತಿರುವ ಛಾಯಾಚಿತ್ರಗಳು ಅಥವಾ ಯಾವುದೇ ವಿಡಿಯೋವನ್ನು ನಾವು ನೋಡಿದರೆ ಮೊದಲು ನಿಮ್ಮನ್ನು ಸಸ್ಪೆಂಡ್ ಮಾಡಲಾಗುತ್ತದೆ ಎಂದು ಕೋರ್ಟ್ ಖಡಕ್ ವಾರ್ನಿಂಗ್ ನೀಡಿದೆ.
Related
