ಬೆಂಗಳೂರು: ಸಾರಿಗೆ ಸಿಬ್ಬಂದಿಗೆ ಸುಪ್ರೀಂ ಕೋರ್ಟ್ ನಿರ್ದೇಶನದನ್ವಯ ಹೈಯರ್ ಪಿಂಚಣಿ ನೀಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಘೋಷಣೆ ಮಾಡಿದರು.
ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಟಿವಿ9 ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಇಂದು ಆಯೋಜಿಸಿದ್ದ ಕನಸಿನ ಕರುನಾಡು ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರಿಗೆ ಇಲಾಖೆ ನೌಕರರ ವೇತನ ಭದ್ರತೆ, ಬಾಕಿ ವೇತ ಬಿಡುಗಡೆ ಇತ್ಯಾದಿ ವಿಚಾರಗಳ ಬಗ್ಗೆ ನೌಕರರ ಮುಖಂಡರು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು. ಈ ಹಿಂದೆ ಪ್ರತಿಭಟನೆ ನಡೆದಾಗ ಕೆಲವರನ್ನು ವಜಾ ಮಾಡಲಾಗಿತ್ತು. 2020ರಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಇರಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ಯಾರನ್ನೂ ಕೆಲಸದಿಂದ ವಜಾಗೊಳಿಸಿಲ್ಲ ಎಂದು ಹೇಳಿದರು.
ಇನ್ನು ಬಿಎಂಟಿಸಿ ನೌಕರರ ವಿರುದ್ಧದ ಮುಷ್ಕರದ ವೇಳೆ ಆಗಿರುವ ಕೇಸ್ ಸದ್ಯ ಕೋರ್ಟ್ನಲ್ಲಿರುವುದರಿಂದ ಅವರನ್ನು ವಾಪಸ್ ತೆಗೆದುಕೊಳ್ಳುವುದಕ್ಕೆ ವಿಳಂಬವಾಗುತ್ತಿದೆ. ಅದನ್ನು ಬಿಟ್ಟರೆ ಕೇಸ್ ಇಲ್ಲದೇ ವಜಾಗೊಂಡಿದ್ದ ಬೇರೆ ನಿಗಮದ ನೌಕರರು ಈಗಾಗಲೇ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ತಿಳಿಸಿದರು.
ಅನೇಕ ಹುದ್ದೆಗಳು ಖಾಲಿ ಇವೆ: ಸಾರಿಗೆ ಇಲಾಖೆಯಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ. ಕೊನೇ ಕ್ಷಣದಲ್ಲಿ ಹಿಂದಿನ ಸರ್ಕಾರ ಕ್ರಮ ಕೈಗೊಂಡಿತ್ತು. ಆದರೆ, ನಾನಾ ಕಾರಣಗಳಿಂದ ಅದು ಅನುಷ್ಠಾನಗೊಂಡಿಲ್ಲ. ಇದೀಗ ಆ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಶಕ್ತಿ ಯೋಜನೆ ಜಾರಿಗೆ ಆರಂಭದಲ್ಲಿ ನೇಮಕಾತಿ ವಿಳಂಬದಿಂದ ಸಮಸ್ಯೆ ಆಗಿದ್ದು ನಿಜ. ಆದರೆ, ನಾವು ಅದನ್ನು ಸೂಕ್ತ ಯೋಜನೆಯೊಂದಿಗೆ ಜಾರಿಗೊಳಿಸಿದೆವು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ಸರ್ಕಾರಕ್ಕೂ ಶಕ್ತಿ ಬಂತು: ಸಾರಿಗೆ ಬಸ್ಗಳಲ್ಲಿ 83 ಲಕ್ಷ ಜನ ಪ್ರತಿ ದಿನ ಓಡಾಡುತ್ತಾ ಇದ್ದರು. ಇದೀಗ ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ 1.10 ಕೋಟಿ ಜನ (ಪುರುಷರು, ಮಹಿಳೆಯರು ಸೇರಿ) ಪ್ರತಿ ದಿನ ಸಾರಿಗೆ ಇಲಾಖೆ ಬಸ್ಗಳಲ್ಲಿ ಓಡಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇನ್ನು ಶಕ್ತಿ ಯೋಜನೆಯಿಂದ ರಾಜ್ಯದ ಹೆಣ್ಣು ಮಕ್ಕಳಿಗೆ ಶಕ್ತಿ ಬಂತು. ಸರ್ಕಾರಕ್ಕೂ ಶಕ್ತಿ ಬಂತು. ಆದರೆ ಸಾರಿಗೆ ಸಂಸ್ಥೆಗಳಿಗೆ ನಷ್ಟವಾಗುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾರಿಗೆ ಸಂಸ್ಥೆಗಳಿಗೆ ಯಾವುದೇ ನಷ್ಟ ಇಲ್ಲ. ಸರ್ಕಾರ ಆ ಹಣವನ್ನು ಸಂಸ್ಥೆಗಳಿಗೆ ನೀಡುತ್ತದೆ ಎಂದು ಹೇಳಿದರು.
ನಾವು 10 ವರ್ಷಗಳ ಕಾಲ ಶಕ್ತಿ ಯೋಜನೆ ಮುಂದುವರಿಸುತ್ತೇವೆ. ಜನಪರ ಯೋಜನೆಗಳಿಂದಾಗಿ ಮುಂದಿನ ಬಾರಿಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.
3-4 ತಿಂಗಳಲ್ಲಿ 13,000 ನೇಮಕ: ಸಾರಿಗೆ ಸಂಸ್ಥೆಗಳಲ್ಲಿ ಬಾಕಿ ಇರುವ 13,000 ನೇಮಕಾತಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಸ್ಯಾಂಕ್ಷನ್ ಆಗಿದೆ. ಕೋವಿಡ್ ಕಾರಣ ಬಾಕಿ ಉಳಿದಿತ್ತು. ಮುಂದಿನ 3-4 ತಿಂಗಳುಗಳಲ್ಲಿ ಎಲ್ಲ ನೇಮಕಾತಿ ಆಗಲಿದೆ ಎಂದು ಹೇಳಿದರು.
ಖಾಸಗೀ ಸಾರಿಗೆಗೆ ಸಣ್ಣ ಪ್ರಮಾಣದ ನಷ್ಟ ಒಪ್ಪಿಕೊಂಡ ಸಚಿವ: ಶಕ್ತಿ ಯೋಜನೆಯಿಂದಾಗಿ ಖಾಸಗಿ ಸಾರಿಗೆಯವರಿಗೆ ಸ್ವಲ್ಪ ಪ್ರಮಾಣದಲ್ಲಿ ನಷ್ಟವಾಗಿದೆ ಅಷ್ಟೆ. ಹೆಚ್ಚೇನೂ ಸಮಸ್ಯೆ ಆಗಿಲ್ಲ. ಖಾಸಗಿಯವರು ಪರಿಹಾರ ಕೇಳುತ್ತಿದ್ದಾರೆ. ಅವರಿಗೆ ಆಗುತ್ತಿರುವ ನಷ್ಟದ ಪ್ರಮಾಣ ಎಷ್ಟೆಂದು ಇನ್ನೂ ಅಂದಾಜಿಸಿಲ್ಲ. ಅದನ್ನು ಅಂದಾಜು ಮಾಡಲಾಗುವುದು ಎಂದು ಸಚಿವರು ಹೇಳಿದರು.
ಇನ್ನು ಪ್ರಾಯೋಗಿಕವಾಗಿ ಏನೆಲ್ಲ ನೆರವು ನೀಡಬಹುದೋ ಅದನ್ನೆಲ್ಲ ಮಾಡಿಕೊಡುತ್ತೇನೆ ಎಂದು ಖಾಸಗಿಯವರಿಗೆ ಭರವಸೆ ನೀಡಿದ್ದೇನೆ ಎಂದ ಸಚಿವರು, ನಮ್ಮ ಸಾರಿಗೆ ನಿಗಮದಲ್ಲಿ ಅದರಲ್ಲೂ ಬಿಎಂಟಿಸಿಯಲ್ಲಿ ಏನು ವಜಾಗೊಂಡಿದ್ದು, ಪೊಲೀಸ್ ಪ್ರಕರಣಗಳಿಂದ ಒಳ ಬರಲಾಗದ ನೌಕರರನ್ನು ಅತೀ ಶೀಘ್ರದಲ್ಲೇ ಪ್ರಕರಣಗಳನ್ನು ವಾಪಸ್ ಪಡೆದು ಡ್ಯೂಟಿಗೆ ಸೇರಿಸಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.