ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ
ಕೆ.ಆರ್.ಪೇಟೆ: ನಾವು ನವೆಂಬರ್ ಕನ್ನಡಿಗರಾಗದೆ, ನೈಜ ಕನ್ನಡಿಗರಾಗಿ ಕನ್ನಡ ನೆಲ, ಜಲ, ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಂಡು ಹೋರಾಟ ಮಾಡಬೇಕು ಎಂದು ಪುರಸಭೆ ಅಧ್ಯಕ್ಷೆ ಪಂಕಜಾ ಕರೆ ನೀಡಿದರು.
ಕೃಷ್ಣರಾಜಪೇಟೆ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಇಂದು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಕನ್ನಡ ಬಾವುಟವನ್ನು ಹಾರಿಸಿ, ತಾಯಿ ಭುವನೇಶ್ವರಿ ಭಾವ ಚಿತ್ರಕ್ಕೆ ಪೂಜೆ ಮಾಡಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ನಾವು ಕೇವಲ ತೋರಿಕೆಗಾಗಿ ಕನ್ನಡಿಗರಾಗದೆ ಕನ್ನಡ ನೆಲ, ಜಲ, ಭಾಷೆಯನ್ನು ಗೌರವಿಸಿ ಆರಾಧಿಸುವ ಮೂಲಕ ನೈಜ ಕನ್ನಡಿಗರಾಗಿ ಹೊರ ಹೊಮ್ಮಬೇಕು. ಕನ್ನಡ ನೆಲದಲ್ಲಿ ವಾಸಿಸುವ ಕನ್ನಡ ಭಾಷೆ ಗೊತ್ತಿಲ್ಲದ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸಿಕೊಡುವ ಕೆಲಸವನ್ನು ಅಭಿಮಾನದಿಂದ ಮಾಡಬೇಕು ಎಂದರು.
ವಿಶ್ವದಲ್ಲಿಯೇ ಅತೀ ಹೆಚ್ಚಿನ ಜನರು ಮಾತನಾಡುವ ಶ್ರೀಮಂತ ಭಾಷೆಯಾಗಿರುವ ಕನ್ನಡ ಭಾಷೆಗೆ ಇಂದು ಕನ್ನಡದ ನೆಲದಲ್ಲಿಯೇ ಆಪತ್ತು ಎದುರಾಗಿದೆ. ತಮಿಳು, ತೆಲುಗು, ಮರಾಠಿ , ಹಿಂದಿ ಸೇರಿದಂತೆ ಅನ್ಯ ಭಾಷಿಕರು ಕನ್ನಡಿಗರ ಮೇಲೆ ಸವಾರಿ ಮಾಡುತ್ತಾ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿದ್ದಾರೆ. ಕನ್ನಡಿಗರಾದ ನಾವು ನಿರಭಿಮಾನಿಗಳಾಗದೆ ಕನ್ನಡ ಭಾಷೆ ಬಗ್ಗೆ ಅಭಿಮಾನ ಬೆಳೆಸಿಕೊಂಡು ಹೆಜ್ಜೆ ಹಾಕಬೇಕು ಎಂದರು.
ಪುರಸಭೆ ಹಿರಿಯ ಸದಸ್ಯ ಡಿ. ಪ್ರೇಮಕುಮಾರ್ ಮಾತನಾಡಿ, ಭಾಷಾವಾರು ಪ್ರಾಂತ್ಯಗಳ ರಚನೆಯಾಗಿ ಕರ್ನಾಟಕ ರಾಜ್ಯವು ಉದಯವಾಗಿ 69ವರ್ಷಗಳಾದ ಸವಿ ನೆನಪಿನ ಹಿನ್ನೆಲೆಯಲ್ಲಿ ನವೆಂಬರ್ ಒಂದನೇ ತಾರೀಕಿನ ಇಂದಿನ ದಿನದಂದು ರಾಜ್ಯದ್ಯಂತ ಕನ್ನಡ ರಾಜ್ಯೋತ್ಸವವನ್ನು ಕನ್ನಡಿಗರ ನುಡಿ ಹಬ್ಬದಂತೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದರು.
ಇನ್ನು ಕನ್ನಡಿಗರಾದ ನಾವು ಇಂಗ್ಲಿಷ್ ಭಾಷೆ ವ್ಯಾಮೋಹದಿಂದ ಹೊರಬಂದು, ಆಂಗ್ಲ ಭಾಷೆಯನ್ನು ಕೇವಲ ಒಂದು ಸಂವಹನ ಭಾಷೆಯಾಗಿ ಕಲಿಯಬೇಕು. ಜತೆಗೆ ಕನ್ನಡ ಭಾಷೆಯನ್ನು ಪ್ರೀತಿಸಿ ಗೌರವಿಸಿ ಆದರಿಸಬೇಕು ಎಂದರು.
ಪುರಸಭೆ ಉಪಾಧ್ಯಕ್ಷೆ ಸೌಭಾಗ್ಯ, ಸದಸ್ಯರಾದ ಬಸ್ ಸಂತೋಷ್, ಪ್ರವೀಣ್, ಗಿರೀಶ್, ಅಶೋಕ್, ಶಾಮಿಯಾನ ತಿಮ್ಮೇಗೌಡ, ಇಂದ್ರಾಣಿ, ಸುಗುಣಾ, ಕಲ್ಪನಾ, ಮುಖ್ಯಧಿಕಾರಿ ನಟರಾಜ್, ಹಿರಿಯ ಆರೋಗ್ಯ ಪರಿವೀಕ್ಷಕ ಬಸವರಾಜ್, ಅಶೋಕ್, ರವಿಕುಮಾರ್, ಹೆಚ್.ಪಿ. ನಾಗರಾಜು, ಭಾರತಿ, ಶಾರದಾ, ರತ್ನ, ಬಬೀತಾ, ದೇವರಾಜು, ಮಂಟೇಮಂಜು, ಪುರಸಭೆ ಕಾನೂನು ಸಲಹೆಗಾರ ಕೌಶಿಕ್, ಮುಖಂಡರಾದ ವಿಶ್ವನಾಥ್, ದೇವರಾಜ್, ಸ್ನೇಹಿತ ರಮೇಶ್, ಕೆ.ಬಿ.ಪ್ರಕಾಶ್, ಸೇರಿದಂತೆ ಪೌರಕಾರ್ಮಿಕರು ಹಾಗೂ ಪುರಸಭೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.