ಬೆಂಗಳೂರು ಗ್ರಾಮಾಂತರ: ಜಿಲ್ಲಾಡಳಿತ, ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಿಲ್ಲಾ ಕೈಗಾರಿಕಾ ಕೇಂದ್ರ ವತಿಯಿಂದ ಎಂ.ಎಸ್.ಎಂ.ಇ ಪ್ರಗತಿ ವೇಗವರ್ಧನೆ ಯೋಜನೆ ಅಡಿಯಲ್ಲಿ ಸೂಕ್ಷ್ಮ ಸಣ್ಣ ಮಧ್ಯಮ ಉದ್ಯಮಿಗಳಿಗೆ ತಂತ್ರಜ್ಞಾನ ಚಿಕಿತ್ಸಾಲಯ- ಏರೋಸ್ಪೇಸ್ ಕ್ಲಸ್ಟರ್ ಕುರಿತು ಎರಡು ದಿನಗಳ ಕಾರ್ಯಾಗಾರ ಆಯೋಜಿಸಲಾಗಿದೆ.
ಕಾರ್ಯಾಗಾರವು ಜುಲೈ 29 ಮತ್ತು 30 ರಂದು ಎರಡು ದಿನ ದೇವನಹಳ್ಳಿ ತಾಲ್ಲೂಕಿನ ವಿಶ್ವನಾಥಪುರದ ಕರ್ನಾಟಕ ಪಬ್ಲಿಕ್ ಶಾಲೆಯ ಸರ್.ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಾಗಾರದಲ್ಲಿ ಏರೋ ಸ್ಪೇಸ್ ಕ್ಷೇತ್ರದ ಕೈಗಾರಿಕೆಗಳಿಗೆ ತಂತ್ರಜ್ಞಾನ ಕುರಿತು ತಿಳುವಳಿಕೆ ನೀಡುವ ಜೊತೆಗೆ ತಾಂತ್ರಿಕ ಸವಾಲುಗಳಿಗೆ ಪರಿಹಾರ ಸೂಚಿಸುವ ವೇದಿಕೆಯಾಗಲಿದೆ. ಕೈಗಾರಿಕೆಗಳು ತಜ್ಞರು ಮತ್ತು ಸರ್ಕಾರಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಉಪನ್ಯಾಸಗಳು ಮತ್ತು ಪರಮಾರ್ಶ ಅಧಿವೇಶನಗಳು ನಡೆಯಲಿದೆ.
ಜುಲೈ 29 ರಂದು ಬೆಳಗ್ಗೆ 10 ಗಂಟೆಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಚ್ ಮುನಿಯಪ್ಪ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ.
ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಶರಣಬಸಪ್ಪ ದರ್ಶನಾಪುರ, 5ನೇ ಹಣಕಾಸು ಆಯೋಗದ ಅಧ್ಯಕ್ಷರಾದ ಸಿ.ನಾರಾಯಣ ಸ್ವಾಮಿ, ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ಹಾಗೂ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಕುಮಾರ್ ಬಚ್ಚೇಗೌಡ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
Related









